ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ತಮ್ಮ ಅಬ್ಬರದ ಬ್ಯಾಟಿಂಗ್ ಮತ್ತು ನಾಯಕತ್ವದಿಂದ ಮಾತ್ರವಲ್ಲ, ಕ್ಯಾಮೆರಾಗಳ ಮುಂದೆ ಹಾಸ್ಯ ಚಟಾಕಿ ಹಾರಿಸುವುದರಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ. ತಮಗೆ ಎದುರಾಗುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ಅಲ್ಲೊಂದು ಹಾಸ್ಯ ಚಟಾಕಿ ಹಾರಿಸುವುದೇ ಧೋನಿ ಅವರ ವಿಶೇಷತೆ.
ಇದೀಗ ಧೋನಿಯವರು ಸಂಬಂಧ (ರಿಲೇಶನ್ಶಿಪ್ಸ್)ಗಳ ಬಗ್ಗೆ ಮಾಡಿರುವ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಜನರ ಗುಂಪನ್ನು ಉದ್ದೇಶಿಸಿ ಮಾತನಾಡಿರುವ ಧೋನಿ, ಸಂಬಂಧಗಳ ಬಗ್ಗೆ ಕೆಲವು ಮೌಲ್ಯಯುತ ಸಲಹೆಗಳನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಬ್ಯಾಚುಲರ್ಗಳನ್ನು ಗುರಿಯಾಗಿಸಿಕೊಂಡು ಧೋನಿ ಮಾತನಾಡಿದ್ದಾರೆ. ಅನೇಕ ಸಂಬಂಧಗಳಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ಗರ್ಲ್ಫ್ರೆಂಡ್ಗಳನ್ನು ಹೊಂದಿರುವ ಬ್ಯಾಚುಲರ್ಗಳಿಗೆ ಈ ಉತ್ತರವನ್ನು ಹೇಳುವ ಮೂಲಕ ನಾನು ಸಾಮಾನ್ಯ ತಪ್ಪುಗ್ರಹಿಕೆಯನ್ನು ತೆರವುಗೊಳಿಸಲು ಬಯಸುತ್ತೇನೆ. ಅದೇನೆಂದರ ನಿಮ್ಮ ನಿಮ್ಮ ಗರ್ಲ್ಫ್ರೆಂಡ್ ಇತರರಿಗಿಂತ ತುಂಬಾ ವಿಭಿನ್ನ ಎಂದು ನಿಮ್ಮಷ್ಟಕ್ಕೆ ನೀವು ಭಾವಿಸಿಕೊಳ್ಳಬೇಡಿ ಎಂದು ಧೋನಿ ಸಲಹೆ ನೀಡಿದರು.
ಧೋನಿ ಅವರು ಈ ಹೇಳಿಕೆಯನ್ನು ನೀಡುತ್ತಿದ್ದಂತೆ ಅಲ್ಲಿ ನೆರದಿದ್ದ ಜನರು ಜೋರಾಗಿ ನಕ್ಕಿರುವುದು ವೈರಲ್ ವಿಡಿಯೋದಲ್ಲಿದೆ. ಈ ಹಿಂದೆಯೂ ಧೋನಿ ಅವರು ನಗೆ ಚಟಾಕಿಗಳನ್ನು ಹಾರಿಸಿದ್ದಾರೆ. ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿರುವ ಧೋನಿ ಮಾತನಾಡುವುದೇ ತುಂಬಾ ವಿರಳ. ಒಂದೊಮ್ಮೆ ಮಾತನಾಡಿದರೂ ಅಲ್ಲಿ ಹಾಸ್ಯಮಯ ಮಾತುಗಳೇ ತುಂಬಿರುತ್ತವೆ.
ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಹೊಂದಿರುವ ಧೋನಿ, ಕ್ರಿಕೆಟ್ ಲೋಕದಲ್ಲಿ ನಾಯಕತ್ವ ವಿಚಾರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. 2010ರ ಜುಲೈ ತಿಂಗಳಲ್ಲಿ ತಮ್ಮ ಗೆಳತಿ ಸಾಕ್ಷಿ ಅವರನ್ನು ಧೋನಿ ವಿವಾಹವಾದರು. 13 ವರ್ಷಗಳ ವೈವಾಹಿಕ ಜೀವನ ಪೂರ್ಣಗೊಳಿಸಿರುವ ದಂಪತಿಗೆ ಝೀವಾ ಹೆಸರಿನ ಮುದ್ದಾದ ಹೆಣ್ಣು ಮಗಳಿದ್ದಾಳೆ. (ಏಜೆನ್ಸೀಸ್)