ಕ್ರೀಡೆ

ಮುಂದಿನ ಸೀಸನ್​ನಲ್ಲೂ ಧೋನಿ ಐಪಿಎಲ್ ಆಡುತ್ತಾರಾ? ಸುರೇಶ್ ರೈನಾ ಹೇಳಿದ್ದಿಷ್ಟು…

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯ ಕಾರಣದಿಂದ ಈ ಬಾರಿಯ ಐಪಿಎಲ್ ಹೆಚ್ಚು ಸುದ್ದಿಯಾಗಿದೆ. ಧೋನಿ ನಿವೃತ್ತಿ ಘೋಷಿಸುತ್ತಾರೆ, ಮುಂದಿನ ವರ್ಷ ಯೆಲ್ಲೋ ಆರ್ಮಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್​​ ತಂಡದ ಪಂದ್ಯದ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಧೋನಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸುತ್ತಿದ್ದಾರೆ.

ಮುಂದಿನ ಸೀಸನ್ ಧೋನಿ ಆಡಲಿದ್ದಾರಾ?

ಧೋನಿ ಮುಂದಿನ ವರ್ಷದಿಂದ ಐಪಿಎಲ್ ಆಡುವುದಿಲ್ಲ ಎಂಬ ಚರ್ಚೆಯ ನಡುವೆ, ಟೀಂ ಇಂಡಿಯಾ ಹಾಗೂ ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಧೋನಿ ಅಭಿಮಾನಿಗಳಿಗೆ ಸಂತಸ ಉಂಟು ಮಾಡುವಂತಹ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವಿನ ಪಂದ್ಯದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಈ ಬಾರಿ ಸಿಎಸ್​ಕೆ ಐಪಿಎಲ್ ಟ್ರೋಫಿ ಗೆದ್ದುಕೊಂಡರೆ ಮುಂದಿನ ಸೀಸನ್​ ಆಡುವುದಾಗಿ ಧೋನಿ ಹೇಳಿಕೊಂಡಿದ್ದಾರೆ ಎಂಬುದನ್ನು ರೈನಾ ಬಹಿರಂಗ ಪಡಿಸಿದ್ದಾರೆ.

ಧೋನಿ ಕಿ ಪಾಠ ಶಾಲಾ!

ಟ್ರೋಫಿ ಗೆದ್ದ ನಂತರ ನಾನು ಇನ್ನೂ ಒಂದು ವರ್ಷ ಐಪಿಎಲ್ ಆಡುತ್ತೇನೆ ಎಂದು ಧೋನಿ ಹೇಳುತ್ತಿದ್ದರು. ಧೋನಿ ಈ ಸೀಸನ್​ನಲ್ಲಿ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜತೆಗೆ ನಾಯಕತ್ವದ ಕಾರಣದಿಂದ ಅನೇಕರು ಚೆನ್ನೈ ತಂಡದ ಪಂದ್ಯ ನೋಡುವಂತೆ ಮಾಡಿದ್ದಾರೆ. ಪ್ರತಿ ಪಂದ್ಯದ ಮುಕ್ತಾಯದ ಬಳಿಕ 'ಧೋನಿ ಕಿ ಪಾಠ ಶಾಲಾ'(ಧೋನಿ ಮಾಸ್ಟರ್‌ ಕ್ಲಾಸ್) ಇರುತ್ತದೆ ಎಂದು ರೈನಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)