ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಎಂಎಸ್ ಧೋನಿ ಈಗಾಗಲೆ ಫ್ಯಾಂಟಸಿ ಸ್ಪೋರ್ಟ್ಸ್ ಆ್ಯಪ್ ಡ್ರೀಮ್11ನ ಪ್ರಚಾರ ರಾಯಭಾರಿಯಾಗಿ ಸಾಕಷ್ಟು ಗಮನ ಸೆಳೆದಿದ್ದಾರೆ. ಇದೀಗ ಅವರು ಆನ್ಲೈನ್ ಇಸ್ಪೀಟು ಆಟದ ಪೋಕರ್ ಸ್ಟಾರ್ಸ್ನ ಪ್ರಚಾರ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.
'ಐಯಾಮ್ ಇನ್' ಎಂಬ ಪೋಕರ್ ಸ್ಟಾರ್ಸ್ನ ಭಾರತ ಪ್ರಚಾರ ಅಭಿಯಾನದ ಜಾಹೀರಾತಿನಲ್ಲಿ ಧೋನಿ ಕಾಣಿಸಿಕೊಂಡಿದ್ದು, ಆನ್ಲೈನ್ ಮೂಲಕ ಇಸ್ಪೀಟು ಆಟವನ್ನು ಆಡಿ ಗಮನ ಸೆಳೆದಿದ್ದಾರೆ. 'ಪೋಕರ್ ಆಟದ ಸ್ಪರ್ಧಾತ್ಮಕತೆ ಮತ್ತು ಒತ್ತಡವನ್ನು ನಾನು ಆನಂದಿಸಿದ್ದೇನೆ. ಇದು ಕ್ರಿಕೆಟ್ ಮತ್ತು ಪೋಕರ್ ಆಟದಲ್ಲಿ ನಾನು ಕಂಡಿರುವ ಸಾಮ್ಯತೆಯಾಗಿದೆ. ಆನ್ಲೈನ್ ಪೋಕರ್ ಆಟದ ವಿಷಯದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಭಾರತದ ಜನರ ಮನಸ್ಥಿತಿ ಬದಲಾಗಿದೆ' ಎಂದು ಧೋನಿ ಹೇಳಿದ್ದಾರೆ. ಅವರು ಕಳೆದ ಏಪ್ರಿಲ್ನಲ್ಲೇ ಪೋಕರ್ಸ್ಟಾರ್ಸ್ನ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದರೂ, ಅವರು ಕಾಣಿಸಿಕೊಂಡಿರುವ ಜಾಹೀರಾತು ಇದೀಗ ಪ್ರಸಾರ ಕಾಣುತ್ತಿದೆ.
'ಇತರ ಎಲ್ಲ ಕ್ರೀಡೆಗಳಂತೆ ಆನ್ಲೈನ್ ಪೋಕರ್ ಆಟದಲ್ಲೂ ಕೌಶಲ ಅಗತ್ಯವಾಗಿದೆ. ತಂತ್ರಗಾರಿಕೆ ಮತ್ತು ಜವಾಬ್ದಾರಿಯುತವಾಗಿ ಆಡಬೇಕಾದ ಆಟವಿದು. ಇದರಲ್ಲಿನ ಆನಂದವನ್ನೂ ನಿಧಾನವಾಗಿ ಮನಗಾಣಲಿದ್ದೀರಿ. ಸುಲಭವಾಗಿ ಕಲಿತುಕೊಳ್ಳಬಹುದು. ಆದರೆ ಇದರಲ್ಲಿನ ಕ್ಲಿಷ್ಟತೆಗಳೂ ಸಾಕಷ್ಟಿವೆ. ಹೊಸ ಭರವಸೆಯೊಂದಿಗೆ ಆನ್ಲೈನ್ ಪೋಕರ್ ಆಟವನ್ನು ದೊಡ್ಡ ಜನಸಂಖ್ಯೆಗೆ ತಲುಪಿಸುತ್ತಿದ್ದೇವೆ' ಎಂದು 39 ವರ್ಷದ ಧೋನಿ ಆನ್ಲೈನ್ ಪೋಕರ್ ಆಟದ ಬಗ್ಗೆ ವಿವರಿಸಿದ್ದಾರೆ.