ಕ್ರೀಡೆ

ಎಂಎಸ್ ಧೋನಿ 19.29ಕ್ಕೆ ನಿವೃತ್ತಿಯಾದ ಹಿಂದಿನ ಮರ್ಮವೇನು?

malli

ಬೆಂಗಳೂರು: ಭಾರತ ತಂಡ ಕಳೆದ ವರ್ಷ ಜುಲೈ 10ರಂದು ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಹೊರಬಿದ್ದ ಸಮಯದಿಂದಲೂ ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ವದಂತಿಗಳು ಹರಿದಾಡುತ್ತಲೇ ಇದ್ದವು. ಆದರೆ ಆಗೆಲ್ಲ ಮೌನವೇ ಧೋನಿ ಉತ್ತರವಾಗಿತ್ತು. ಶನಿವಾರ ದೇಶ 74ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದ ಮತ್ತು ಯುಎಇಯಲ್ಲಿ ಐಪಿಎಲ್ ಟೂರ್ನಿ ಆಡಲು ಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ಅನಿರೀಕ್ಷಿತವಾಗಿ ಧೋನಿ ಅವರಿಂದ ನಿವೃತ್ತಿ ನಿರ್ಧಾರ ಹೊರಬಿದ್ದಿದೆ. ಯಾವುದೇ ಪತ್ರಿಕಾಗೋಷ್ಠಿ (ಕರೊನಾ ಸಮಯದಲ್ಲಿ ಇದು ಸಾಧ್ಯವೂ ಇಲ್ಲ) ಇಲ್ಲದೆ, ಕೇವಲ ಇನ್‌ಸ್ಟಾಗ್ರಾಂ ಪೋಸ್ಟ್ ಒಂದರ 16 ಪದಗಳ ಬರಹದೊಂದಿಗೆ ದಿಢೀರ್ ವಿದಾಯ ಪ್ರಕಟಿಸಿದರು. ಸಂಜೆ 7.29ರಿಂದ (19.29) ನನ್ನನ್ನು ನಿವೃತ್ತಿ ಎಂದು ಪರಿಗಣಿಸಿ ಎಂದು ಅವರು ಅದರಲ್ಲಿ ಉಲ್ಲೇಖಿಸಿರುವುದು ಭಾರಿ ಜಿಜ್ಞಾಸೆ ಮತ್ತು ಗೊಂದಲಗಳಿಗೆ ಕಾರಣವಾಗಿದೆ.

ಧೋನಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆನಿಸಿರುವ 2019ರ ಏಕದಿನ ವಿಶ್ವಕಪ್ ಸೆಮಿೈನಲ್, ಭಾರತೀಯ ಕಾಲಮಾನದ ಪ್ರಕಾರ ಇದೇ ಸಮಯಕ್ಕೆ ಮುಗಿದಿತ್ತು ಎಂದು ಹೇಳಲಾಗುತ್ತಿದೆ. ನಿಖರವಾಗಿ ನೋಡಿದರೆ ಜುಲೈ 10ರಂದು ಪಂದ್ಯ ಸರಿಸುಮಾರು ಇದಕ್ಕೆ ಕೆಲ ನಿಮಿಷ ಮುಂಚಿತವಾಗಿಯೇ ಮುಕ್ತಾಯ ಕಂಡಿತ್ತು. ಆದರೂ ಈ ವಾದವನ್ನು ಬಹುತೇಕ ಒಪ್ಪಿಕೊಳ್ಳಬಹುದೆನಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲಗಳು ತಿಳಿಸುವ ಇನ್ನೊಂದು ಮಾಹಿತಿಯ ಪ್ರಕಾರ, ದೇಶದ ದಕ್ಷಿಣ ಭಾಗದ ಕೊನೆಯ ಸೂರ್ಯಾಸ್ತದ ಸಮಯ ಇದಾಗಿದೆ. ಧೋನಿ ನಿವೃತ್ತಿಗೆ ಅದನ್ನೇ ಸಮಾನಾರ್ಥಕವಾಗಿ ಬಳಸಿದ್ದಾರೆ. ಆದರೆ ನಿಜಕ್ಕೂ ಶನಿವಾರ ಸೂರ್ಯಾಸ್ತದ ಸಮಯ ಅಷ್ಟೊಂದು ತಡವಾಗಿದೆಯೇ ಎಂಬ ಪ್ರಶ್ನೆ ಗೊಂದಲ ಮೂಡಿಸುತ್ತಿದೆ. 1929 ದೇವದೂತರ ಸಂಖ್ಯೆ. ದೇವದೂತರ ಅಧ್ಯಾಯ ಅಂತಿಮ ಘಟ್ಟ ತಲುಪಿದ ಸಂಕೇತವಾಗಿಯೂ ಈ ಸಂಖ್ಯೆ ಬಳಕೆಯಾಗುತ್ತದೆ ಎನ್ನಲಾಗಿದೆ.

ಧೋನಿ ದೇಶಭಕ್ತಿಯ ಪ್ರತೀಕವಾಗಿ ನಿವೃತ್ತಿಗೆ ಸ್ವಾತಂತ್ರ್ಯದ ದಿನವನ್ನೇ ಆರಿಸಿಕೊಂಡಿದ್ದಾರೆ ಎಂದು ಅವರ ಮ್ಯಾನೇಜರ್ ಮಿಹಿರ್ ದಿವಾಕರ್ ತಿಳಿಸಿದ್ದಾರೆ. ದೇಶಭಕ್ತಿಗೆ ಸ್ವಾತಂತ್ರ್ಯೋತ್ಸವಕ್ಕಿಂತ ಉತ್ತಮವಾದ ದಿನವಿಲ್ಲ. ಹೀಗಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಲು ಅದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.