ಕ್ರೀಡೆ

ಇದೇನಾದ್ರೂ ಸಂಭವಿಸಿದ್ರೆ ಸಿಎಸ್​ಕೆಗೆ ಬರಲಿದೆ ಆನೆಬಲ! ಧೋನಿ ಪಡೆಗೆ ಸ್ಟಾರ್​ ಆಟಗಾರನ ಎಂಟ್ರಿ?

ನವದೆಹಲಿ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಟ್ರೋಫಿಯನ್ನು ಭಾರತಕ್ಕೆ ತಂದುಕೊಟ್ಟಿತು. ವಿಶ್ವಕಪ್ ಪಂದ್ಯಗಳನ್ನು ಕಣ್ತುಂಬಿಕೊಂಡ ಕ್ರಿಕೆಟ್ ಅಭಿಮಾನಿಗಳು ಮುಂಬರುವ ಎಲ್ಲಾ ಟೂರ್ನಿಗಳು ಟೀಮ್ ಇಂಡಿಯಾ ಪಾಲಾಗಲಿ ಎಂದೇ ಆಶಿಸಿದ್ದಾರೆ. ಅದರಂತೆಯೇ ಈ ಟೂರ್ನಿ ಮುಗಿಯುತ್ತಿದ್ದಂತೆ ಶುಭಮನ್​ ಗಿಲ್ ನಾಯಕತ್ವದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯನ್ನು ಕೂಡ ಭಾರತ ಗೆದ್ದು ಬೀಗಿತು. ಸದ್ಯ ಮುಂಬರುವ ಶ್ರೀಲಂಕಾ ಟೂರ್​ನಲ್ಲಿ ಟೀಮ್ ಇಂಡಿಯಾ ಹೇಗೆ ಆಡಲಿದೆ ಎಂಬ ನಿರೀಕ್ಷೆಗಳು ಹೆಚ್ಚಾಗಿದ್ದರೆ, ಮತ್ತೊಂದೆಡೆ 2025ರ ಐಪಿಎಲ್​ ಆವೃತ್ತಿಗೆ ಇಂದಿನಿಂದಲೇ ಚರ್ಚೆಗಳು ಜೋರಾಗಿವೆ.

ಒಂದೆಡೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್​ ನಾಯಕನಾಗಿರುವ ಕನ್ನಡಿಗ ಕೆ.ಎಲ್. ರಾಹುಲ್ ಸೇರ್ಪಡೆಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರೀ ಚರ್ಚೆ ಗ್ರಾಸವಾಗಿದೆ. ಇನ್ನು ಈ ವದಂತಿಗಳ ಮಧ್ಯೆ ಹೊಸ ವರದಿಯೊಂದು ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್​ ಐದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಲ್ಲಿಯವರೆಗೆ ಸಿಎಸ್​ಕೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಕ್ರಿಕೆಟ್ ದಿಗ್ಗಜ, 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಅವರು ಮುಂಬರುವ ಆವೃತ್ತಿಯಲ್ಲಿ ತಮ್ಮ ನಿವೃತ್ತಿ ಘೋಷಿಸಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದು, ಈ ಹಿನ್ನಲೆ ಧೋನಿ ಅವರಂತೆ ಸ್ಮಾರ್ಟ್​, ಬುದ್ಧಿಶಾಲಿ ವಿಕೆಟ್ ಕೀಪರ್ ಅವಶ್ಯಕತೆ ಸಿಎಸ್​ಕೆಗೆ ಅಗತ್ಯವಿದೆ. ಎಂಎಸ್​ಡಿ ಸ್ಥಾನವನ್ನು ತುಂಬುವಂತ ಮತ್ತೊಬ್ಬ ಸ್ಟಾರ್​ ಆಟಗಾರನೇ ಬೇಕಾಗಿದ್ದು, ಇದೀಗ ಆ ಸ್ಥಾನಕ್ಕೆ ರಿಷಭ್ ಪಂತ್​​ರನ್ನು ಕರೆತರಲು ಸಿಎಸ್​ಕೆ ಮ್ಯಾನೇಜ್​ಮೆಂಟ್​ ಸಜ್ಜಾಗಿದೆ.

ಸದ್ಯ ಇದೆಲ್ಲವೂ ಮೆಗಾ ಐಪಿಎಲ್​ ಆಕ್ಷನ್ ಮೇಲೆ ನಿಂತಿದ್ದು, 2025ರ ಹರಾಜಿಗೆ ಮುಂಚಿತವಾಗಿಯೇ ರಿಷಬ್​ ದೆಹಲಿ ಕ್ಯಾಪಿಟಲ್ಸ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಮೆಗಾ ಹರಾಜಿನ ಮೊದಲು, ಎಲ್ಲಾ 10 ಫ್ರಾಂಚೈಸಿಗಳು ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೆ ಮುಂಚಿತವಾಗಿ ತಮ್ಮ ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಬಿಡುಗಡೆಗೊಳಿಸಬೇಕಾಗುತ್ತದೆ. ಹರಿದಾಡುತ್ತಿರುವ ವದಂತಿ ನಿಜವಾಗುತ್ತೋ ಅಥವಾ ಧೋನಿ ನಿವೃತ್ತಿ ಘೋಷಿಸದೆ ಸಿಎಸ್​ಕೆಗೆ ಮತ್ತೊಂದು ವರ್ಷ ಆಡಲಿದ್ದಾರೋ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).