ನವದೆಹಲಿ: ಭಾರತದ ಲೆಜೆಂಡರಿ ಕ್ಯಾಪ್ಟನ್ ಎಂ.ಎಸ್. ಧೋನಿ ಧರಿಸುತ್ತಿದ್ದ ಐಕಾನಿಕ್ ಅಥವಾ ಸಾಂಪ್ರದಾಯಿಕ 7ನೇ ನಂಬರ್ ಜರ್ಸಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿವೃತ್ತಿ ಘೋಷಿಸುವ ಮೂಲಕ ಗೌರವ ಸೂಚಿಸಿದೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ನಂತರ ಬಿಸಿಸಿಐ ನಿವೃತ್ತಿಗೊಳಿಸಿದ ಎರಡನೇ ಜರ್ಸಿ ಧೋನಿ ಅವರದ್ದಾಗಿದೆ.
ಕ್ರೀಡೆಗೆ ಧೋನಿ ನೀಡಿರುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಅವರ ಜರ್ಸಿಗೆ ನಿವೃತ್ತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಇನ್ನು ಮುಂದೆ 7ನೇ ನಂಬರಿನ ಜರ್ಸಿಯನ್ನು ಯಾವೊಬ್ಬ ಆಟಗಾರನು ಕೂಡ ಬಳಸುವಂತಿಲ್ಲ. ಇದೇನಿದ್ದರೂ ಧೋನಿಗೆ ಮಾತ್ರ ಸೀಮಿತವಾಗಿರಲಿದೆ.
ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ಕ್ರೀಡಾ ಜಗತ್ತಿನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಧೋನಿ, ಕ್ರಿಕೆಟ್ ಲೋಕದ ಅಪ್ರತಿಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯಂತಹ ಎಲ್ಲ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ತಂಡದ ಪರ 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10 ಶತಕ ಮತ್ತು 73 ಅರ್ಧ ಶತಕಗಳೊಂದಿಗೆ 50.57 ರನ್ ಸರಾಸರಿಯಲ್ಲಿ ಒಟ್ಟು 10,773 ರನ್ ಕಲೆಹಾಕಿದ್ದಾರೆ. ಟಿ20 ಪಂದ್ಯಗಳ ವಿಚಾರಕ್ಕೆ ಬಂದರೆ, ಒಟ್ಟು 98 ಪಂದ್ಯಗಳನ್ನು ಆಡಿರುವ ಧೋನಿ, 37.60 ಸರಾಸರಿಯೊಂದಿಗೆ 126.13 ಸ್ಟ್ರೈಕ್ರೇಟ್ನಲ್ಲಿ 1617 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೋನಿ, 97 ಪಂದ್ಯಗಳಲ್ಲಿ 6 ಶತಕ ಮತ್ತು 33 ಅರ್ಧಶತಕಗಳೊಂದಿಗೆ 4876 ರನ್ ಕಲೆಹಾಕಿದ್ದಾರೆ.
ವಿಕೆಟ್ಕೀಪರ್ ಆಗಿ ತಮ್ಮ ವೃತ್ತಿಬದುಕಿನಲ್ಲಿ ಧೋನಿ ಅವರು ಅತ್ಯದ್ಭುತ ಕೌಶಲಗಳನ್ನು ತೋರಿದ್ದಾರೆ. ತಮ್ಮ ಚಾಕಚಕ್ಯತೆಯಿಂದ ಅನೇಕ ಪಂದ್ಯಗಳಲ್ಲಿ ಸ್ಪಂಪೌಟ್ ಹಾಗೂ ರನೌಟ್ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ವಿಶ್ವ ಕ್ರಿಕೆಟ್ನ ಶ್ರೇಷ್ಠ ವಿಕೆಟ್ ಕೀಪರ್ಗಳ ಸಾಲಿನಲ್ಲಿ ಧೋನಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಒಟ್ಟು 294 ಬಾರಿ ವಿಕೆಟ್ಗಳನ್ನು ತೆಗೆದಿದ್ದಾರೆ.
ಜೆರ್ಸಿಗಳ ನಿವೃತ್ತಿ ಸಂಪ್ರದಾಯವು ಕೇವಲ ಕ್ರಿಕೆಟ್ ಮಾತ್ರ ಸೀಮಿತವಾಗಿಲ್ಲ, ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ತಂಡಗಳ ಆಟಗಾರರು ಕೂಡ ಇದೇ ರೀತಿಯನ್ನು ಅನುಸರಿಸುತ್ತಾರೆ. ಚಿಕಾಗೊ ಬುಲ್ಸ್, ಮೈಕೆಲ್ ಜೋರ್ಡಾನ್ ಅವರ ಪ್ರಸಿದ್ಧ ಸಂಖ್ಯೆ 23ರ ಜರ್ಸಿಯನ್ನು ನಿವೃತ್ತಿಗೊಳಿಸಿತು. ಅದೇ ರೀತಿ ಇಟಾಲಿಯನ್ ಕ್ಲಬ್ ನಪೋಲಿ, ಡಿಯಾಗೋ ಮರಡೋನಾ ಅವರ ಸಾಂಪ್ರದಾಯಿಕ ಸಂಖ್ಯೆ 10 ಅನ್ನು ಸಹ ನಿವೃತ್ತಿಗೊಳಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಾರ್ಗಸೂಚಿಗಳ ಅಡಿಯಲ್ಲಿ, ಆಟಗಾರರು ತಮ್ಮ ಜರ್ಸಿಗಾಗಿ 1 ರಿಂದ 100 ರ ನಡುವೆ ಯಾವುದೇ ಸಂಖ್ಯೆಯನ್ನು ಆರಿಸಿಕೊಳ್ಳುವುದು ವಾಡಿಕೆ. ಆದಾಗ್ಯೂ, ಭಾರತದಲ್ಲಿ ಆಯ್ಕೆಗಳ ವ್ಯಾಪ್ತಿಯನ್ನು ಸ್ವಲ್ಪಮಟ್ಟಿಗೆ ನಿರ್ಬಂಧಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಿಂಚಿದ 21 ವರ್ಷದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಭಾರತದ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದ ವೇಳೆ ರಾಯಲ್ಸ್‌ನಲ್ಲಿ ಧರಿಸಿದ್ದ 19ನೇ ಸಂಖ್ಯೆ ಜರ್ಸಿಯನ್ನೇ ಧರಿಸಲು ಬಯಸಿದ್ದರು. ಆದರೆ, ಈ ಸಂಖ್ಯೆಯನ್ನು ಈಗಾಗಲೇ ದಿನೇಶ್ ಕಾರ್ತಿಕ್ ಅವರು ತೆಗೆದುಕೊಂಡಿದ್ದರು. ಹೀಗಾಗಿ ಜೈಸ್ವಾಲ್ ತಮ್ಮ ಚೊಚ್ಚಲ ಪಂದ್ಯಕ್ಕಾಗಿ 64ನೇ ಸಂಖ್ಯೆಯ ಜೆರ್ಸಿಯನ್ನು ಆರಿಸಿಕೊಳ್ಳಬೇಕಾಯಿತು. (ಏಜೆನ್ಸೀಸ್)