ಮುಂಬೈ: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅವರು ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವದಡಿ ಆಡಿದವರು. ನಾಯಕರಾಗಿ ಈ ಮೂವರ ನಡುವಿನ ವ್ಯತ್ಯಾಸವನ್ನು ಇದೀಗ ಅವರು ಹೇಳಿದ್ದಾರೆ.
ಏಕದಿನ ಪಂದ್ಯಾವಳಿಗಳು, ಐಪಿಎಲ್ಗಳಲ್ಲಿ ಆಡಿರುವ ಪಾರ್ಥಿವ್ ಪಟೇಲ್ ಅವರು, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ನಾಯಕತ್ವನ್ನು ನಿಭಾಯಿಸುವ ಬಗೆಯನ್ನು ಯೂಟ್ಯೂಬ್ ಚಾನಲ್ವೊಂದರ ಮೂಲಕ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಅವರು, ವಿರಾಟ್ ಕೊಹ್ಲಿಯವರದ್ದು ಆಕ್ರಮಣಶೀಲ ಮನೋಭಾವ. ಅವರು ನಾಯಕತ್ವ ನಿಭಾಯಿಸುವ ಬಗೆಯೇ ವಿಭಿನ್ನ. ಪ್ರತಿ ಸಂದರ್ಭದಲ್ಲಿಯೂ ತಾವೇ ಮುಂದೆ ಇರಲು ಇಚ್ಛಿಸುತ್ತಾರೆ. ಸದಾ ಅಗ್ರೆಸ್ಸಿವ್ ಆಗಿಯೇ ಇದ್ದು, ತಂಡದಲ್ಲಿ ತಾನೇ ಮೊದಲಿಗನಾಗಿದ್ದುಕೊಂಡು ಆಟಗಾರರನ್ನು ನಿಭಾಯಿಸುತ್ತಾರೆ. ಅದು ಅವರಿಗೆ ಕರೆಕ್ಟ್ ಆಗಿ ಸೂಟ್ ಆಗುತ್ತದೆ ಎಂದು ಹೇಳಿದ್ದಾರೆ.
ಧೋನಿ ಮತ್ತು ರೋಹಿತ್ ಡ್ರೆಸ್ಸಿಂಗ್ ರೂಂ ಶಾಂತಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ ಕೊಹ್ಲಿ ಹಾಗಲ್ಲ. ಅಲ್ಲೂ ಕೂಡ ಎಲ್ಲರೂ ತಮ್ಮ ನಿಯಂತ್ರಣದಲ್ಲೆ ಇರಬೇಕು ಎಂದು ಇಚ್ಛಿಸುತ್ತಾರೆ ಎಂದಿದ್ದಾರೆ.
ಪಾರ್ಥಿವ್ ಪಟೇಲ್ ಅವರು 2008 ರಿಂದ 2010ರವರೆಗೆ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮೂರು ಸೀಸನ್ಗಳನ್ನು, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಆಡಿದ್ದಾರೆ. ಹಾಗೇ 2015ರಿಂದ 2017ರವರೆಗೆ ಮೂರು ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಡಿ ಕ್ರಿಕೆಟ್ ಆಡಿದ್ದಾರೆ. ಅದಾದ ಬಳಿಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ಸೇರಿಕೊಂಡಿದ್ದಾರೆ.
ಎಂ.ಎಸ್.ಧೋನಿ ಪ್ರತಿ ಆಟಗಾರನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದನ್ನು ಗುರುತಿಸಿ, ಹೊರಗೆ ತೆಗೆಯುತ್ತಾರೆ. ಯಾವುದೇ ಆಟಗಾರ ಇರಲಿ, ಅವನ ಸ್ವಂತ ಶೈಲಿಯಲ್ಲಿಯೇ ಆಡಲು, ತಾನೇನು? ತನ್ನ ಸಾಮರ್ಥ್ಯವೇನು ಎಂಬುದನ್ನು ತೆರೆದಿಡಲು ಸಂಪೂರ್ಣ ಅವಕಾಶ ಕೊಡುತ್ತಾರೆ ಎಂದು ಪಾರ್ಥಿವ್ ಹೇಳಿದ್ದಾರೆ.
ಇನ್ನು ಐಪಿಎಲ್ನ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಪಾರ್ಥಿವ್ ಪಟೇಲ್, ರೋಹಿತ್ ಅವರು ತುಂಬ ಅಚ್ಚುಕಟ್ಟಾಗಿ ಯೋಜನೆಗಳನ್ನು ರೂಪಿಸುತ್ತಾರೆ. ಅಂದಿನ ಆಟದಲ್ಲಿ ಯಾವ ಆಟಗಾರನ ಪಾತ್ರವೇನು ಎಂಬುದನ್ನು ಚೆನ್ನಾಗಿ ವಿವರಿಸುತ್ತಾರೆ. ತಂಡವನ್ನು ಉತ್ತೇಜಿಸಿ, ಆಡಿಸುತ್ತಾರೆ. ತಂಡ ನಿರ್ವಹಣೆಯಲ್ಲಿ ಧೋನಿ ಮತ್ತು ರೋಹಿತ್ ಶರ್ಮಾ ನಿಜಕ್ಕೂ ಉತ್ತಮರು ಎಂದು ಹೇಳಿದ್ದಾರೆ. (ಏಜೆನ್ಸೀಸ್)