ಕ್ರೀಡೆ

ಮಹಿಳೆಯರ ಏಕದಿನ ವಿಶ್ವಕಪ್: ಆಸೀಸ್ ಆಘಾತದಿಂದ ಪಾರು; ಪಾಕ್​ಗೆ ಹ್ಯಾಟ್ರಿಕ್​ ಸೋಲು

ಕೊಲಂಬೊ: ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ಅನುಭವಿ ಬೆಥ್​ ಮೂನಿ (109 ರನ್​, 114 ಎಸೆತ, 11 ಬೌಂಡರಿ) ದಿಟ್ಟ ಶತಕದ ಸಾಹಸ ಹಾಗೂ ಬೌಲರ್​ಗಳ ಸಂಟಿತ ನಿರ್ವಹಣೆ ಬಲದಿಂದ ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ ತಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ ಎದುರು 107 ರನ್​ಗಳ ಬೃಹತ್​ ಗೆಲುವು ದಾಖಲಿಸಿದೆ. ಇದರೊಂದಿಗೆ ಅಲೀಸಾ ಹೀಲಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸತತ ಮೂರನೇ ಸೋಲಿಗೆ ತುತ್ತಾದ ಪಾಕ್​ನ ಸೆಮಿೈನಲ್​ ಹಾದಿ ಜಟಿಲಗೊಂಡಿದೆ.

ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆಸೀಸ್​, 76 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿತು. ಆಗ 9ನೇ ವಿಕೆಟ್​ಗೆ ಮೂನಿ ಜತೆಯಾದ ಅಲನ್​ ಕಿಂಗ್​ (51* ರನ್​, 49 ಎಸೆತ, 3 ಬೌಂಡರಿ, 3 ಸಿಕ್ಸರ್​) 97 ಎಸೆತಗಳಲ್ಲಿ 106 ರನ್​ ಕಸಿದರು. ಇದರೊಂದಿಗೆ ಆಸೀಸ್​ 9 ವಿಕೆಟ್​ಗೆ 221 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಕಿಮ್​ ಗಾರ್ತ್​ (14ಕ್ಕೆ 3) ಸಹಿತ ಇತರ ಬೌಲರ್​ಗಳ ದಾಳಿ ಎದುರು ಕನಿಷ್ಠ ಪ್ರತಿರೋಧವೂ ತೋರದ ಪಾಕಿಸ್ತಾನ 36.3 ಓವರ್​ಗಳಲ್ಲಿ 114 ರನ್​ಗಳಿಗೆ ಸರ್ವಪತನ ಕಂಡಿತು.

ಆಸ್ಟ್ರೆಲಿಯಾ: 9 ವಿಕೆಟ್​ಗೆ 221 (ಅಲೀಸಾ 20, ಲಿಚ್ಛೀಫಿಲ್ಡ್​ 10, ಪೆರ್ರಿ 5, ಬೆಥ್​ ಮೂನಿ 109, ಸುದರ್​ಲ್ಯಾಂಡ್​ 1, ಮೆಕ್​ಗ್ರಾತ್​ 5, ಕಿಮ್​ ಗಾರ್ತ್​ 11, ಅಲನ್​ ಕಿಂಗ್​ 51*, ನಶ್ರ ಸಂಧು 37ಕ್ಕೆ 3, ರಮೀನಾ 29ಕ್ಕೆ 2). ಪಾಕಿಸ್ತಾನ: 36.3 ಓವರ್​ಗಳಲ್ಲಿ 114 (ಸದ್​ 5, ಮುನೀಬಾ 3, ಸಿದ್ರಾ 35, ಸಿದ್ರಾ ನವಾಜ್​ 5, ನಟಾಲಿಯಾ 1, ಫಾತೀಮಾ 11, ರಮೀನಾ 15, ನಶ್ರ 11, ಕಿಮ್​ ಗಾರ್ತ್​ 14ಕ್ಕೆ 3, ಸುದರ್​ಲ್ಯಾಂಡ್​ 15ಕ್ಕೆ 2).