Mohammed Siraj: ಪ್ರಸಕ್ತ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ನ ಐದನೇ ದಿನದಂದು ಗಿಲ್ ಪಡೆ ಗೆಲುವಿಗಾಗಿ ಕ್ರೀಸ್ನಲ್ಲಿ ಸೆಣಸುತ್ತಿದೆ. ಪ್ರಸ್ತುತ ಐದು ವಿಕೆಟ್ಗಳನ್ನು ಕಳೆದುಕೊಂಡಿರುವ ಭಾರತ ಪರ ಕೆ.ಎಲ್. ರಾಹುಲ್ ಮತ್ತು ರವೀಂದ್ರ ಜಡೇಜಾ ಅಖಾಡದಲ್ಲಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ವೇಗಿಗೆ ಶಾಕ್ ಕೊಟ್ಟಿರುವ ಐಸಿಸಿ, ಮೊಹಮ್ಮದ್ ಸಿರಾಜ್ ನಡೆಗೆ ದಂಡದ ಮೂಲಕ ಪ್ರತಿಕ್ರಿಯಿಸಿದೆ.
ಪಂದ್ಯ ಶುಲ್ಕದ ಶೇ.15ರಷ್ಟು ದಂಡವನ್ನು ಸಿರಾಜ್ಗೆ ವಿಧಿಸಿದೆ. ಇದರೊಟ್ಟಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿಸಿದೆ. ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿರಾಜ್ಗೆ ದಂಡ ವಿಧಿಸಲಾಗಿದೆ. ಅಷ್ಟಕ್ಕೂ ವೇಗಿ ಮಾಡಿದ ತಪ್ಪೇನು? ಆಗಿದ್ದಾದರು ಏನು? ಎಂಬುದರ ವಿವರ ಹೀಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 387 ರನ್ ಕಲೆಹಾಕಿತು. ಬಳಿಕ ಬ್ಯಾಟ್ ಮಾಡಿದ ಭಾರತ ಕೂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 387 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾಗೆ ಕ್ಯಾಚ್ ನೀಡಿದ ಬೆನ್ ಡಕೆಟ್ (12) ಔಟಾದರು. ಡಕೆಟ್ ಪೆವಿಲಿಯನ್ಗೆ ಹೋಗುತ್ತಿದ್ದಂತೆ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದ ಸಿರಾಜ್, ಈ ವಿಷಯದಲ್ಲಿ ಐಸಿಸಿ ನೀತಿ ಸಂಹಿತೆಗೆ ವಿರುದ್ಧವಾಗಿ ನಡೆದುಕೊಂಡರು. ಇದೇ ಅವರ ದಂಡಕ್ಕೆ ಕಾರಣವಾಗಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಸಿರಾಜ್ ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಐಸಿಸಿ, ಅವರ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ. ಆದಾಗ್ಯೂ, ಒಬ್ಬ ಆಟಗಾರ 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‌ಗಳನ್ನು ಸಂಗ್ರಹಿಸಿದರೆ, ಅವುಗಳನ್ನು ಅಮಾನತು ಪಾಯಿಂಟ್‌ಗಳಾಗಿ ಪರಿವರ್ತಿಸಲಾಗುತ್ತದೆ. ಇದು ಎಚ್ಚರಿಕೆ ಸಂದೇಶವಾಗಿದೆ. ಹಾಗೂ ಆ ಆಟಗಾರನನ್ನು ಮುಂಬರುವ ಪಂದ್ಯದಿಂದ ನಿಷೇಧಿಸಲಾಗುತ್ತದೆ,(ಏಜೆನ್ಸೀಸ್).