ನವದೆಹಲಿ: ಮಾರ್ಚ್ 04ರಂದು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಭರ್ಜರಿ ಜಯಗಳಿಸಿದ್ದು, ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಇನ್ನೂ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ (Mohammed Shami) ಜ್ಯೂಸ್ ಕುಡಿದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಮೊಹಮ್ಮದ್ ಶಮಿಯನ್ನು ಕ್ರಿಮಿನಲ್ ಎಂದು ಕರೆದಿದ್ದಾರೆ.
ಪವಿತ್ರ ರಂಜಾನ್ ಮಾಸ ಪ್ರಯುಕ್ತ ಈಗಾಗಲೇ ಮುಸ್ಲಿಮರು ಉಪವಾಸವನ್ನು ಆಚರಿಸುತ್ತಿದ್ದು, ಮೊಹಮ್ಮದ್ ಶಮಿ (Mohammed Shami) ತಮ್ಮ ದೇಶಕ್ಕಾಗಿ ರಂಜಾನ್ ಉಪವಾಸವನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಉತ್ತಮ ಪ್ರದರ್ಶನ ನೀಡುವ ಸಲುವಾಗಿ ತಮ್ಮ ಉಪವಾಸವನ್ನು ಮುರಿದಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಶಮಿಯ ನಡೆಯನ್ನು ಖಂಡಿಸಿರುವ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಕಿಡಿಕಾರಿದ್ದು, ಇವರ ಹೇಳಿಕೆಗಳು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಈ ಕುರಿತು ಮಾತನಾಡಿರುವ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಮೊಹಮ್ಮದ್ ಶಮಿ (Mohammed Shami) ಓರ್ವ ಕ್ರಮಿನಲ್, ಆತ ಅಲ್ಲಾಗೆ ಉತ್ತರಿಸಲೇಬೇಕಾಗುತ್ತದೆ. ರೋಜಾ ಮಾಡದೆ ಮೊಹಮ್ಮದ್ ಶಮಿ ಅಪರಾಧ ಮಾಡಿದ್ದಾರೆ. ಅವರು ಹೀಗೆ ಮಾಡಬಾರದಾಗಿತ್ತು. ಶರಿಯತ್ ದೃಷ್ಟಿಯಲ್ಲಿ ಅವರು ಖಂಡಿತವಾಗಿಯೂ ಅಪರಾಧಿ. ಅವರು ದೇವರಿಗೆ ಉತ್ತರಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿಕೆಯೂ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ದೇಶವನ್ನು ಪ್ರತಿನಿಧಿಸುವ ಆಟಗಾರನ ಬದ್ಧತೆಯನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಒಂದು ವೇಳೆ ಶಮಿ ಉಪವಾಸ ಕೈಗೊಂಡು ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದರೆ ಅದು ಖಂಡಿತವಾಗಿಯೂ ತಂಡದ ಮೇಲೆ ಪರಿಣಾಮ ಬೀರುತ್ತಿತ್ತು. ಇದನ್ನು ಮನಗಂಡೇ ಶಮಿ ಉಪವಾಸ ಕೈಗೊಂಡಿಲ್ಲ. ಅಷ್ಟಕ್ಕೆ ಅವರನ್ನು ಧರ್ಮವಿರೋಧಿ, ಅಪರಾಧಿ ಎಂದೆಲ್ಲಾ ಕರೆಯುವುದು ಸಮಂಜಸವಲ್ಲ ಎಂದು ನೆಟ್ಟಿಗರು ಹಾಗೂ ರಾಜಕೀಯ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.