ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದ್ದು, ಎದುರಾಳಿಗಳನ್ನು 228 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ನಾಯಕನ ನಿರ್ಧಾರವನ್ನು ತಪ್ಪು ಎಂದು ಸಾಬೀತು ಮಾಡಿದ ಭಾರತದ ಬೌಲರ್ಗಳು ಆರಂಭದಲ್ಲೇ ಎದುರಾಳಿಗಳಿಗೆ ಶಾಕ್ ನೀಡಿದರು. ಪ್ರಮುಖವಾಗಿ ವೇಗಿ ಮೊಹಮ್ಮದ್ ಶಮಿ (Mohammed Shami) 5 ವಿಕೆಟ್ಗಳನ್ನು ತೆಗೆಯುವ ಮೂಲಕ ಏಕದಿನ ಮಾದರಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಏಕದಿನ ವಿಶ್ವಕಪ್ ಬಳಿಕ ತಂಡದಲ್ಲಿ ಸ್ಥಾನ ಪಡೆದಿರುವ ವೇಗಿ ಮೊಹಮ್ಮದ್ ಶಮಿ (Mohammed Shami) ಎದುರಾಳಿಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಒಟ್ಟು ಬೌಲಿಂಗ್ ಮಾಡಿದ ಶಮಿ ಎದುರಾಳಿಗಳ 5 ವಿಕೆಟ್ಅನ್ನು ತೆಗೆಯುವ ಮೂಲಕ ತಂಡಕ್ಕೆ ನೆರವಾದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ನನ್ನು ಹಿಂದಿಕ್ಕಿದ್ದಾರೆ.
ಶಮಿ ಈ ಸಾಧನೆ ಮಾಡಲು 5126 ಎಸೆತಗಳನ್ನು ತೆಗೆದುಕೊಂಡಿದ್ದು, ಸ್ಟಾರ್ಕ್ 5240 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹಮ್ಮದ್ ಶಮಿ (Mohammed Shami) ಪಾತ್ರರಾದರು.