ಕ್ರೀಡೆ

ಎಲ್ರ ಕಾಲೆಳೆಯುತ್ತೇ ಕಾಲ… ಅಖ್ತರ್​ಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಶಮಿ!

ನವದೆಹಲಿ: ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಪಾಕಿಸ್ತಾನದ ಕಪ್ ಗೆಲ್ಲುವ ಆಸೆಗೆ ತಣ್ಣಿರೆರಚಿದಂತಾಗಿದೆ. ಇದೀಗ ಪಾಕಿಸ್ತಾನದ ಆಟಗಾರರು ಹಾಗೂ ಫ್ಯಾನ್ಸ್​ ನಿರಾಸೆಯ ಮುಖ ಹೊತ್ತಿದ್ದಾರೆ. ಈ ನಡುವೆ ಈ ಬಾರಿಯ ಟಿ-20 ವಿಶ್ವಕಪ್​ನ್ನು ಪಾಕಿಸ್ತಾನ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆಯಲ್ಲಿ, ಪಾಕಿಸ್ತಾನದ ಕೆಲವು ಮಾಜಿ ಆಟಗಾರರು ಅನೇಕ ಹೇಳಿಕೆಗಳನ್ನು ನೀಡಿದ್ದರು. ತನ್ನ ಹೇಳಿಕೆಗಳ ಮೂಲಕ ಎದುರಾಳಿಗಳ ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದ್ದವರಲ್ಲಿ ಪಾಕ್​​ನ ಮಾಜಿ ಆಟಗಾರ ಶೋಯೆಬ್ ಅಖ್ತರ್ ಅಗ್ರಗಣ್ಯರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅಖ್ತರ್, ಇಂಗ್ಲೆಂಡ್ ತಂಡ ಅತಿಯಾದ ಆತ್ಮವಿಶ್ವಾಸದಲ್ಲಿದೆ. ನಾವು ಫೈನಲ್ ಆಡುತ್ತಿರುವುದು ಪಾಕಿಸ್ತಾನ ತಂಡದ ವಿರುದ್ಧ. ಭಾರತೀಯ ಬೌಲರ್​ಗಳಂತಲ್ಲ ಪಾಕ್ ಬೌಲರ್​ಗಳು ಎಂದು ಹೇಳಿದ್ದರು.

ಇದೀಗ ಪಾಕಿಸ್ತಾನ ಫೈನಲ್​ನಲ್ಲಿ ಸೋಲೊಪ್ಪಿಕೊಳ್ಳುತ್ತಿದ್ದಂತೆ, ಅಖ್ತರ್​​ ಮೌನವಾಗಿದ್ದಾರೆ. ತಾನಾಡಿದ ಅತಿಯಾದ ಆತ್ಮವಿಶ್ವಾಸದ ಮಾತುಗಳನ್ನೆಲ್ಲಾ ಹಿಂತೆಗೆದುಕೊಳ್ಳಬೇಕಾದ ಸಂದರ್ಭ ಎದುರಾಗಿದೆ. ಅದರಲ್ಲೂ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲುತ್ತಿದ್ದಂತೆ ಅಖ್ತರ್ ತಮ್ಮ ನಾಲಿಗೆ ಹರಿಬಿಟ್ಟಿದ್ದರು. ಇದೀಗ ಫೈನಲ್​ನಲ್ಲಿ ಪಾಕಿಸ್ತಾನಕ್ಕೆ ಸೋಲಾಗುತ್ತಿದ್ದಂತೆ, ಹೃದಯ ಒಡೆದಿದೆ ಎಂಬರ್ಧದಲ್ಲಿ ಅಖ್ತರ್ ಹೃದಯದ ಇಮೋಜಿಯನ್ನು ಟ್ವೀಟ್ ಮಾಡಿದ್ದಾರೆ.

ಅಖ್ತರ್ ಒಡೆದ ಹೃದಯದ ಇಮೋಜಿಯನ್ನು ಟ್ವೀಟ್ ಮಾಡುತ್ತಿದ್ದಂತೆ, ಭಾರತ ತಂಡದ ವೇಗೆ ಮೊಹಮ್ಮದ್ ಶಮಿ ರೀಟ್ವೀಟ್ ಮಾಡುವ ಮೂಲಕ ಅಖ್ತರ್​ನ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಶಮಿ ರೀಟ್ವೀಟ್ ಮಾಡಿ ಕ್ಷಮಿಸಿ ಸಹೋದರ. ಇದನ್ನ ಕರ್ಮ ಎಂದು ಕರೆಯುತ್ತಾರೆ (Sorry brother ...It’s call karma) ಎಂದು ಶಮಿ ಟ್ವೀಟ್ ಮಾಡಿದ್ದಾರೆ.