ಕ್ರೀಡೆ

ರಂಜಾನ್ ಉಪವಾಸ ವೇಳೆ ಎನರ್ಜಿ ಡ್ರಿಂಕ್​​ ಸೇವನೆ... ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಶಮಿ! Mohammed Shami

Mohammed Shami : ಟೀಮ್​ ಇಂಡಿಯಾ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ನಮ್ಮ ಭಾರತ ಕಂಡ ಅತ್ಯುತ್ತಮ ವೇಗದ ಬೌಲರ್​ಗಳಲ್ಲಿ ಒಬ್ಬರು. ಟೀಮ್​ ಇಂಡಿಯಾಗೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದರು ಕೂಡ ಶಮಿ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗುತ್ತಲೇ ಇರುತ್ತಾರೆ. ಅವರನ್ನು ದ್ವೇಷ ಮಾಡುವವರ ಸಂಖ್ಯೆಯು ಕೂಡ ಹೆಚ್ಚಿದೆ. ತಾನೊಬ್ಬ ಅಪ್ರತಿಮ ದೇಶ ಭಕ್ತನೆಂಬುದನ್ನು ಆಗಾಗ ಸಾಬೀತು ಮಾಡಿದರು ಕೂಡ ಅವರನ್ನು ಆಗಾಗ ಜಾಲತಾಣದಲ್ಲಿ ಟಾರ್ಗೆಟ್​ ಮಾಡಲಾಗುತ್ತಿರುತ್ತದೆ. ಆದರೆ, ವಾಸ್ತವದ ಸಂಗತಿ ಏನೆಂದರೆ, ಯಾರು? ಏನೇ ಹೇಳಲಿ ಮತ್ತು ಏನೇ ಟ್ರೋಲ್​ ಮಾಡಲಿ ಅದರ ಜೊತೆಜೊತೆಗೆ ಶಮಿ ಸಾಗುತ್ತಿರುತ್ತಾರೆ. ಕಾಯಕವಷ್ಟೇ ನನ್ನ ಆಯ್ಕೆ ಎಂಬುದು ಶಮಿಯ ನಡೆಯಾಗಿದೆ. ಈ ಕಾರಣಕ್ಕೆ ಶಮಿ ವಿರುದ್ಧದ ಟ್ರೋಲ್​ಗಳು ಅವರ ಸಾಧನೆಯಲ್ಲಿ ಸಮಾಧಿಯಾಗಿವೆ.

ಇತ್ತೀಚೆಗೆ ಶಮಿ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಅದರಲ್ಲಿ ಪ್ರಮುಖವಾಗಿ ಎಲ್ಲರ ಗಮನ ಸೆಳೆದ ಒಂದು ಸಂಗತಿ ಏನೆಂದರೆ, ರಂಜಾನ್​ ಸಂರ್ಭದಲ್ಲಿ ಎದ್ದಿದ ವಿವಾದವೊಂದಕ್ಕೆ ಶಮಿ ಅಂತಿಮವಾಗಿ ಪ್ರತಿಕ್ರಿಯೆ ನೀಡಿದರು. ನಿಮಗೆಲ್ಲರಿಗೂ ಗೊತ್ತಿದೆ ರಂಜಾನ್​ ಉಪವಾಸ ಸಮಯದಲ್ಲಿ ಮುಸ್ಲಿಮರು ಸೂರ್ಯ ಮುಳುಗುವವರೆಗೂ ಏನನ್ನು ಸೇವಿಸುವುದಿಲ್ಲ. ಒಂದು ಹನಿ ನೀರನ್ನು ಕೂಡ ಕುಡಿಯುವುದಿಲ್ಲ. ಆದರೆ, ಶಮಿ ಅವರು ಮೈದಾನದಲ್ಲಿ ಎನರ್ಜಿ ಡ್ರಿಂಕ್ಸ್​ ಕುಡಿದಿದ್ದರು.

ಹೌದು, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಶಮಿ ಅವರು ಎನರ್ಜಿ ಡ್ರಿಂಕ್ ಕುಡಿಯುತ್ತಿರುವ ಚಿತ್ರ ವೈರಲ್ ಆಗಿತ್ತು. ಬಳಿಕ ಇದು ಭಾರಿ ವಿವಾದಕ್ಕೆ ಕಾರಣವಾಯಿತು. ಏಕೆಂದರೆ, ರಂಜಾನ್​ ಉಪವಾಸ ಸಮಯದಲ್ಲಿ ಎನರ್ಜಿ ಡ್ರಿಂಕ್ಸ್​ ಕುಡಿದಿದ್ದಕ್ಕೆ ಅನೇಕ ಮುಸ್ಲಿಂ ಧರ್ಮಗುರುಗಳು ಶಮಿ ಅವರನ್ನು ಟೀಕಿಸಿದರು. ಇದೀಗ, ಈ ವಿವಾದದ ಬಗ್ಗೆ ಶಮಿ ಪ್ರತಿಕ್ರಿಯೆ ನೀಡಿದ್ದು, ಆ ಸಮಯದಲ್ಲಿ ಎನರ್ಜಿ ಡ್ರಿಂಕ್ಸ್​ ಅಗತ್ಯ ಏಕಿತ್ತು ಎಂಬುದನ್ನು ವಿವರಿಸಿದ್ದಾರೆ.

ನ್ಯೂಸ್ 24 ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಮಿ, ಪವಿತ್ರ ಗ್ರಂಥಗಳು ಸಹ ಪ್ರಯಾಣಿಸುವ, ರಾಷ್ಟ್ರವನ್ನು ಪ್ರತಿನಿಧಿಸುವ ಅಥವಾ ಉಪವಾಸ ಮಾಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಜನರಿಗೆ ಕೆಲವು ವಿನಾಯಿತಿಗಳನ್ನು ಅನುಮತಿಸುತ್ತವೆ ಎಂದರು. ನಾವು 42 ಅಥವಾ 45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ನಡುವೆ​ ಪಂದ್ಯಗಳನ್ನು ಆಡುತ್ತೇವೆ. ಈ ವೇಳೆ ನಾವು ನಮ್ಮನ್ನು ತ್ಯಾಗ ಮಾಡಿಕೊಳ್ಳುತ್ತೇವೆ. ನೀವು ದೇಶಕ್ಕಾಗಿ ಏನಾದರೂ ಮಾಡುತ್ತಿದ್ದರೆ ಅಥವಾ ಪ್ರಯಾಣಿಸುತ್ತಿದ್ದರೆ ಕೆಲವು ಪ್ರಕರಣಗಳಲ್ಲಿ ವಿನಾಯಿತಿಗಳಿವೆ ಎಂದು ನಮ್ಮ ಕಾನೂನು (ಷರಿಯಾ ಕಾನೂನು) ಸಹ ಹೇಳುತ್ತದೆ. ಜನರು ಈ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಜನರು ಇತರರನ್ನು ಮಾದರಿಗಳಾಗಿ ನೋಡುತ್ತಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಆದರೆ, ಆ ವ್ಯಕ್ತಿ ನಿಖರವಾಗಿ ಏನು ಮಾಡುತ್ತಿದ್ದಾನೆ ಮತ್ತು ಯಾರಿಗಾಗಿ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ನಮ್ಮ ಕಾನೂನು ಕೂಡ ನಮಗೆ ಕೆಲವು ವಿನಾಯಿತಿಗಳನ್ನು ಅನುಮತಿಸುತ್ತದೆ. ಕಾನೂನು ಮೀರಿದ ಸಂದರ್ಭದಲ್ಲಿ ಅದಕ್ಕಾಗಿ ನಾವು ದಂಡವನ್ನು ಪಾವತಿಸಬಹುದು ಅಥವಾ ಪರಿಹಾರವನ್ನು ಪಡೆಯಬಹುದು. ನಾನದನ್ನು ಮಾಡಿದ್ದೇನೆ ಎನ್ನುವ ಮೂಲಕ ವಿರೋಧಿಗಳಿಗೆ ಶಮಿ ತಿರುಗೇಟು ನೀಡಿದರು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಬಗ್ಗೆ ಬರೆಯುವುದನ್ನು ನಾನು ಓದುವುದಿಲ್ಲ. ಆದ್ದರಿಂದ, ಟ್ರೋಲ್‌ಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವೇಗಿ ಇದೇ ಸಂದರ್ಭದಲ್ಲಿ ವಿವರಿಸಿದರು. ಅವರ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳನ್ನು ಈಗ ಅವರ ತಂಡ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಕೆಲವರು ಬೆಳಕಿಗೆ ಬರಲು ಏನೇನೋ ಮಾತನಾಡುತ್ತಾರೆ ಮತ್ತು ಸೂಕ್ತವಲ್ಲದ ವಿಷಯಗಳನ್ನು ಎತ್ತಿ ತೋರಿಸಲು ಬಯಸುತ್ತಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ಗಳನ್ನು ಎಂದಿಗೂ ಓದುವುದಿಲ್ಲ ಮತ್ತು ನನ್ನ ತಂಡವು ನನ್ನ ಖಾತೆಗಳನ್ನು ನಿರ್ವಹಿಸುತ್ತದೆ ಎಂದರು.

ಸಂದರ್ಶನದ ಸಮಯದಲ್ಲಿ, ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಅನುಪಸ್ಥಿತಿ, ಸಂಭಾವ್ಯ ನಿವೃತ್ತಿ ಮತ್ತು ಇನ್ನೂ ಅನೇಕ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದರು.

ರಂಜಾನ್​ ವಿವಾದದ ಹಿನ್ನೆಲೆ ಏನು?

ರಂಜಾನ್ ತಿಂಗಳಲ್ಲಿ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ 2025ರ ಚಾಂಪಿಯನ್ಸ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಎನರ್ಜಿ ಡ್ರಿಂಕ್ ಕುಡಿಯುತ್ತಿರುವ ಚಿತ್ರ ವೈರಲ್ ಆಗಿದ್ದರಿಂದ ವಿವಾದಕ್ಕೆ ಕಾರಣವಾಯಿತು. ರಂಜಾನ್ ಸಮಯದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ (ರೋಜಾ) ಮಾಡುತ್ತಾರೆ. ಇದರಲ್ಲಿ ನೀರು ಮತ್ತು ಆಹಾರ ಸೇವನೆಯನ್ನು ತಪ್ಪಿಸುತ್ತಾರೆ. ಶಮಿ ರೋಜಾವನ್ನು ಉಲ್ಲಂಘಿಸಿದ್ದಾರೆ ಎಂದು ಆಲ್ ಇಂಡಿಯಾ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಟೀಕಿಸಿದರು. ಅಲ್ಲದೆ, ಇದನ್ನು ಶರಿಯತ್‌ನಲ್ಲಿ "ಗುನಾಹ" ಮತ್ತು "ಅಪರಾಧ" ಎಂದು ಕರೆದರು.

ಆದರೆ, ಶಮಿಯನ್ನು ಬೆಂಬಲಿಸಿದವರು, ರಾಷ್ಟ್ರೀಯ ಕರ್ತವ್ಯ ಮತ್ತು ಕ್ರೀಡಾಕೂಟದ ಒತ್ತಡದಿಂದಾಗಿ ರೋಜಾದಿಂದ ವಿನಾಯಿತಿ ಪಡೆಯಬಹುದೆಂದು ವಾದಿಸಿದರು. ಇಸ್ಲಾಮಿಕ್ ನಿಯಮಗಳ ಪ್ರಕಾರ, ಪ್ರಯಾಣದಲ್ಲಿರುವವರು ಅಥವಾ ಆರೋಗ್ಯ ಸಮಸ್ಯೆ ಇರುವವರು ರೋಜಾದಿಂದ ವಿನಾಯಿತಿ ಪಡೆಯಬಹುದು ಎಂದು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹ್ಲಿ ಸ್ಪಷ್ಟಪಡಿಸಿದರು. ಶಮಿಯ ಸೋದರಸಂಬಂಧಿ ಮುಮ್ತಾಜ್ ಮತ್ತು ಎಂಸಿಎ ಮುಖ್ಯಸ್ಥ ರೋಹಿತ್ ಪವಾರ್ ಕೂಡ ಶಮಿಯ ದೇಶಭಕ್ತಿಯನ್ನು ಸಮರ್ಥಿಸಿಕೊಂಡರು. ಕ್ರೀಡಾಂಗಣದಲ್ಲಿ ಶಕ್ತಿಯ ಅವಶ್ಯಕತೆಯನ್ನು ಒತ್ತಿ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಶಮಿಯನ್ನು ಟೀಕಿಸಿದವರು, ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಶಿಮ್ ಆಮ್ಲಾ ರಂಜಾನ್‌ನಲ್ಲಿ ರೋಜಾವನ್ನು ಉಲ್ಲಂಘಿಸದೇ ಆಡಿದ್ದಾರೆ ಎಂದು ಹೋಲಿಕೆ ಮಾಡಿದರು. ಆದರೆ, ಆಮ್ಲಾ ತಾವು ಆ ಪಂದ್ಯದಲ್ಲಿ ರೋಜಾ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿವಾದದಲ್ಲಿ ಶಮಿಯ ಬೆಂಬಲಕ್ಕೆ ಜಾವೇದ್ ಅಖ್ತರ್ ಮತ್ತು ಇತರರು ನಿಂತರು. ಕ್ರೀಡೆಯಲ್ಲಿ ಧಾರ್ಮಿಕ ವಿಷಯಗಳನ್ನು ಎಳೆಯಬಾರದು ಎಂದು ವಾದಿಸಿದರು. ಅದೇ ಪಂದ್ಯದಲ್ಲಿ ಶಮಿ ಅವರು 10 ಓವರ್‌ಗಳಲ್ಲಿ 3/48 ರನ್‌ಗಳೊಂದಿಗೆ ಭಾರತಕ್ಕೆ ಗೆಲುವು ತಂದುಕೊಟ್ಟರು. (ಏಜೆನ್ಸೀಸ್​)