ಕ್ರೀಡೆ

ಪಾರ್ಟ್​ ಟೈಂ ಬೌಲರ್​ಗಳಿಂದ ಹೇಗೆ ಗೆಲ್ತೀರಾ? ಗಿಲ್​ ನಾಯಕತ್ವ ವಿರುದ್ಧ ದಿಗ್ಗಜ ಆಟಗಾರನ ಆಕ್ರೋಶ! IND vs AUS

ಪರ್ತ್​ : ಟೀಮ್ ಇಂಡಿಯಾ ( IND vs AUS ) ಏಕದಿನ ತಂಡದ ನಾಯಕ ಶುಭಮಾನ್ ಗಿಲ್ ವಿರುದ್ಧ ಮಾಜಿ ಆಟಗಾರ ಮೊಹಮ್ಮದ್ ಕೈಫ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗಿಲ್​ ನಾಯಕತ್ವ ಕಳಪೆಯಾಗಿತ್ತು ಎಂದು ಕೈಫ್​ ಹೇಳಿದ್ದಾರೆ.

ಟೀಮ್​ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲದೀಪ್​ ಯಾದವ್ ಇಲ್ಲದೆ ಭಾನುವಾರದ ಪಂದ್ಯವನ್ನು ಆಡಿತು. ಇದರ ಪರಿಣಾಮ ಗಿಲ್​ ಪಡೆ ಹೀನಾಯ ಸೋಲು ಅನುಭವಿಸಿತು. ಕುಲದೀಪ್​ ಅವರನ್ನು ತಂಡದಿಂದ ಹೊರಗಿಟ್ಟಿದ್ದಕ್ಕಾಗಿ ಈಗಾಗಲೇ ತಂಡದ ಆಡಳಿತ ಮಂಡಳಿ ವಿರುದ್ಧ ತೀವ್ರ ಟೀಕೆಗಳು ಎದುರಾಗುತ್ತಿವೆ. ಈ ಪಟ್ಟಿಗೆ ಇದೀಗ ಮೊಹಮ್ಮದ್ ಕೈಫ್ ಕೂಡ ಸೇರಿದ್ದಾರೆ.

ಪಾರ್ಟ್ ಟೈಮ್ ಬೌಲರ್‌ಗಳಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಕೈಫ್​ ಕಿಡಿಕಾರಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೈಫ್​, ವಿಕೆಟ್ ಟೇಕಿಂಗ್ ಬೌಲರ್ ಕುಲದೀಪ್​ ಯಾದವ್ ಅವರನ್ನು ಪಂದ್ಯದಿಂದ ಹೊರಗಿಟ್ಟಿದ್ದು ಗಿಲ್​ ಮಾಡಿದ ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ಇನ್ನು ಆಸ್ಟ್ರೇಲಿಯಾ ಪ್ರವಾಸವು ಭಾರತೀಯ ಬೌಲರ್‌ಗಳಿಗೆ ಹಾಗೂ ಶುಭಮಾನ್ ಗಿಲ್ ಅವರ ನಾಯಕತ್ವಕ್ಕೆ ಒಂದು ಪರೀಕ್ಷೆಯಾಗಲಿದೆ ಎಂದು ಕೈಫ್​ ಹೇಳಿದರು. ಅಂತಿಮ ತಂಡದಲ್ಲಿ ಕುಲದೀಪ್ ಯಾದವ್ ಅವರನ್ನು ಸೇರಿಸಬೇಕಾಗಿತ್ತು. ವಿಕೆಟ್ ಟೇಕಿಂಗ್​ ಬೌಲರ್ ಅನ್ನು ಹನ್ನೊಂದರ ಬಳಗಕ್ಕೆ ಸೇರಿಸದಿರುವುದು ಬೇಸರ ತರಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಕೂಡ ಎರಡು ವಿಕೆಟ್‌ಗಳನ್ನು ಪಡೆದರು. ತಂಡದ ಸಮತೋಲನಕ್ಕಾಗಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಕೈಫ್​ ಹೇಳಿದರು.

2025ರ ಏಷ್ಯಾ ಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಕುಲದೀಪ್ ಯಾದವ್ ಪ್ರಮುಖ ಪಾತ್ರ ವಹಿಸಿದರು. ಅವರು ಏಳು ಇನ್ನಿಂಗ್ಸ್‌ಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದರು. ಅವರು ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಕುಲದೀಪ್​ ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದರು. ಈ ಸರಣಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನ 82 ರನ್​ಗೆ 5 ವಿಕೆಟ್​ ಪಡೆದಿದ್ದು. ಕುಲದೀಪ್ ಅವರು ಆಸ್ಟ್ರೇಲಿಯಾ ವಿರುದ್ಧವೂ ಉತ್ತಮ ದಾಖಲೆ ಹೊಂದಿದ್ದಾರೆ. ಅವರು ಆಸೀಸ್ ವಿರುದ್ಧ 23 ಏಕದಿನ ಪಂದ್ಯಗಳಲ್ಲಿ 31 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪಾರ್ಟ್​ ಟೈಂ ಬೌಲರ್‌ಗಳಿಂದ ಗೆಲ್ಲಲು ಸಾಧ್ಯವಿಲ್ಲ

ತಂಡದಲ್ಲಿ ಸ್ಟಾರ್ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇಲ್ಲದ ಕಾರಣ, ಉಳಿದ ಬೌಲರ್‌ಗಳು ಮುಂದೆ ಬಂದು ಪಂದ್ಯ ಗೆಲ್ಲುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ತಂಡದಲ್ಲಿ ಅನೇಕ ಪಾರ್ಟ್​ ಟೈಂ ಬೌಲರ್‌ಗಳಿದ್ದಾರೆ. ನಿತೀಶ್ ರೆಡ್ಡಿ ಪೂರ್ಣ ಪ್ರಮಾಣದ ಬೌಲರ್ ಅಲ್ಲ. ಪರ್ತ್‌ನಂತಹ ಪಿಚ್‌ನಲ್ಲಿ ವಾಷಿಂಗ್ಟನ್​ ಸುಂದರ್ ಕೂಡ ಪೂರ್ಣ ಪ್ರಮಾಣದ ಬೌಲರ್ ಅಲ್ಲ. ಇನ್ನು ಹರ್ಷಿತ್ ರಾಣಾ ಅವರ ಬೌಲಿಂಗ್‌ ಪರಿಣಾಮಕಾರಿಯಾಗಿಲ್ಲ. ಗುರಿ ಚಿಕ್ಕದಾಗಿದ್ದರೂ ತಂಡವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಬೌಲರ್‌ಗಳು ತೆಗೆದುಕೊಳ್ಳಬೇಕು ಎಂದು ಕೈಫ್​ ಸಲಹೆ ನೀಡಿದರು. ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇರ್ ವಾರ್ನ್ ಮೂರು ಸ್ವರೂಪಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂಬ ಅಂಶವನ್ನು ನಾವಿಲ್ಲಿ ಮರೆಯಬಾರದು. ಆಸೀಸ್ ವಿಕೆಟ್‌ಗಳು ಸ್ಪಿನ್ನರ್‌ಗಳಿಗೆ ಸೂಕ್ತವಲ್ಲ ಎಂಬ ವಾದವನ್ನು ಕೈಫ್​ ಅವರು ಇದೇ ವೇಳೆ ತಳ್ಳಿಹಾಕಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಅಕ್ಟೋಬರ್ 23 ರಂದು ಅಡಿಲೇಡ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದ ಸೋಲಿನ ಟೀಕೆಗಳ ಬಳಿಕ ಈ ಪಂದ್ಯದಲ್ಲಿ ಭಾರತ ಯಾವ ರೀತಿಯ ಪ್ಲೇಯಿಂಗ್ XI ತಂಡವನ್ನು ಸಂಯೋಜಿಸಲಿದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್​)