ಕ್ರೀಡೆ

ಮದ್ಯದ ಲೋಗೋ ಇರುವ ಜೆರ್ಸಿ ತೊಡುವುದಿಲ್ಲ ಎಂದ ಮೋಯೀನ್ ಅಲಿ

ಮುಂಬೈ: ಇಂಗ್ಲೆಂಡಿನ ಕ್ರಿಕೆಟ್ ಆಲ್​ರೌಂಡರ್ ಮೋಯೀನ್ ಅಲಿ ತಮ್ಮ ಐಪಿಎಲ್​ ಜೆರ್ಸಿಯಿಂದ ಮದ್ಯದ ಬ್ರಾಂಡ್​ನ ಲೋಗೋ ತೆಗೆಯಬೇಕೆಂದು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್​ಕೆ) ಆಡಳಿತವನ್ನು ಮನವಿ ಮಾಡಿದ್ದಾರೆ.

ಸಿಎಸ್​ಕೆ ತಂಡದ ಪರವಾಗಿ ಆಟ ಆಡುಲಿರುವ ಅಲಿ, ಪ್ರಾಯೋಜಕರಲ್ಲಿ ಒಬ್ಬರಾದ ಎಸ್​ಎನ್​ಜೆ ಡಿಸ್ಟಿಲರೀಸ್​ನ ಎಸ್​ಎನ್​ಜೆ 10000 ಚಿಹ್ನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಸ್ಲಾಂ ಧರ್ಮವನ್ನು ಪಾಲಿಸುವ ಅಲಿ, ತಮ್ಮ ನಂಬಿಕೆಯಲ್ಲಿ ಮದ್ಯ ಸೇವಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ತಾವು ಅದರ ಲೋಗೋ ಇರುವ ಜೆರ್ಸಿ ತೊಡಲಾಗುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅಲಿ ಅವರ ಈ ಬೇಡಿಕೆಗೆ ಮನ್ನಣೆ ಇತ್ತಿರುವ ಸಿಎಸ್​ಕೆ ಆಡಳಿತವು, ನಿರ್ದಿಷ್ಟ ಲೋಗೋವನ್ನು ಅವರ ಜೆರ್ಸಿಯಿಂದ ತೆಗೆಯಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 33 ವರ್ಷ ವಯಸ್ಸಿನ ಮೋಯೀನ್ ಅಲಿ ಅವರನ್ನು ಸಿಎಸ್​​ಕೆ, 7 ಕೋಟಿ ರೂಪಾಯಿ ಬಿಡ್ ಮಾಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಈ ಮುನ್ನ ಐಪಿಎಲ್​ನ ಮೂರು ಸೀಸನ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಅಲಿ ಆಟವಾಡಿದ್ದಾರೆ. (ಏಜೆನ್ಸೀಸ್)