ಆಸ್ಟ್ರೇಲಿಯಾ: ಜೂನ್ 1ರಂದು ಪ್ರಾರಂಭವಾಗಲಿರುವ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ 9 ನಗರಗಳಲ್ಲಿ ನಡೆಯಲಿರುವ 2024 ರ ಟಿ20 ವಿಶ್ವಕಪ್ ಟೂರ್ನಮೆಂಟ್‌ಗೆ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಬಹುದು ಎಂದು ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಸುಳಿವು ನೀಡಿದ್ದಾರೆ.
2023ರ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಅವರು ಐಸಿಸಿಯ ಚುಟುಕು ಸ್ವರೂಪದ ಪಂದ್ಯಾವಳಿಯಲ್ಲಿ ನಾಯಕನ ಪಾತ್ರವನ್ನು ವಹಿಸಿಕೊಳ್ಳಲು ತಂಡದ ಮ್ಯಾನೇಜ್‌ಮೆಂಟ್ ಬೆಂಬಲ ಪಡೆದಿದ್ದಾರೆ.
ಈ ವಿಷಯದ ಕುರಿತು ಮಾತನಾಡಿದ ಆಂಡ್ರ್ಯೂ ಮೆಕ್‌ಡೊನಾಲ್ಡ್, ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ಬೆಳವಣಿಗೆಯನ್ನು ಅಂತಿಮಗೊಳಿಸುವ ಮೊದಲು ಇದು ಕೇವಲ ಸಮಯದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಆರೋನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ನಂತರ ಮಾರ್ಷ್ ಅವರನ್ನು ಹಂಗಾಮಿ ನಾಯಕನಾಗಿ ನೇಮಿಸಲಾಗಿತ್ತು. ಸದ್ಯ ಆಸೀಸ್ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ T20ಯಲ್ಲಿ ನಾಯಕತ್ವದ ಬಗ್ಗೆ ಆಸಕ್ತಿ ವಹಿಸುತ್ತಿಲ್ವಂತೆ. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಗೆದ್ದುಕೊಂಡಿತ್ತು. ಇದಾಗ್ಯೂ ಟಿ20 ತಂಡದ ನಾಯಕತ್ವದಿಂದ ಕಮಿನ್ಸ್ ಅವರನ್ನು ಕೈ ಬಿಡಲಾಗಿದೆ.
2023ರಲ್ಲಿ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಮಿಚೆಲ್ ಮಾರ್ಷ್ ಪ್ರಮುಖ ಪಾತ್ರವಹಿಸಿದ್ದರು. ಇಂಗ್ಲೆಂಡ್‌ನಲ್ಲಿ ಆಶಸ್ ಸರಣಿಯನ್ನು ಉಳಿಸಿಕೊಳ್ಳಲು ತಂಡಕ್ಕೆ ನೆರವಾದರು. ಅದೇ ಕಾರಣಕ್ಕಾಗಿ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ಗೆ ವರ್ಷದ ಆರಂಭದಲ್ಲಿ ಅಲನ್ ಬಾರ್ಡರ್ ಪದಕ ಕೂಡ ನೀಡಲಾಯಿತು.
ಆಸ್ಟ್ರೇಲಿಯಾ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಜೂನ್ 6ರಂದು ಬಾರ್ಬಡೋಸ್‌ನಲ್ಲಿ ಓಮನ್ ತಂಡದ ವಿರುದ್ಧ ಪ್ರಾರಂಭಿಸಲಿದೆ. ಆಸ್ಟ್ರೇಲಿಯಾ ತಂಡ ಜೂನ್ 12 ಮತ್ತು 16ರಂದು ಕ್ರಮವಾಗಿ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಆಡುವ ಮುನ್ನ ಜೂನ್ 9ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆದಾಗ್ಯೂ ಪಂದ್ಯಾವಳಿಯ ಮೊದಲು ಆಸ್ಟ್ರೇಲಿಯಾ ತಂಡವು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.