ಕ್ರೀಡೆ

ವಿಶ್ವಕಪ್​ಗೆ ನಕಲಿ ಟಿಕೆಟ್​ ಹಾವಳಿ ಭೀತಿ; ಶುರುವಾಗಿವೆ ಫೇಕ್​ ವೆಬ್​ಸೈಟ್​ಗಳು!

ಬೆಂಗಳೂರು: ಭಾರತದಲ್ಲಿ ಯಾವಾಗಲೂ ಕ್ರಿಕೆಟ್​ ಪಂದ್ಯಗಳ ಟಿಕೆಟ್​ಗಳಿಗೆ ಭಾರಿ ಬೇಡಿಕೆ ಇರುತ್ತದೆ. ಅದರಲ್ಲೂ ಈ ಬಾರಿ ಭಾರತದಲ್ಲೇ ವಿಶ್ವಕಪ್​ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್​ಗಳಿಗೆ ಇನ್ನಿಲ್ಲದ ಬೇಡಿಕೆ ಕಂಡುಬಂದಿದೆ. ಅಕ್ಟೋಬರ್​ 5ರಿಂದ ನಡೆಯಲಿರುವ ಟೂರ್ನಿಗೆ ಕೇವಲ ಒಂದೂವರೆ ತಿಂಗಳು ಬಾಕಿ ಇರುವಾಗ ಆನ್​ಲೈನ್​ ಟಿಕೆಟ್​ ಮಾರಾಟ ಪ್ರಕ್ರಿಯೆ ಆರಂಭಗೊಂಡಿದ್ದರೂ, ಮೊದಲ ಹಂತದಲ್ಲಿ ಮಾರಾಟಕ್ಕಿಟ್ಟ ಎಲ್ಲ ಟಿಕೆಟ್​ಗಳು ಈಗಾಗಲೆ ಸೋಲ್ಡ್​ಔಟ್​ ಆಗಿವೆ ಎಂದು ಟೂರ್ನಿಯ ಅಧಿಕೃತ ಟಿಕೆಟ್​ ಮಾರಾಟ ವೆಬ್​ಸೈಟ್​ "ಬುಕ್​ ಮೈ ಶೋ' ತಿಳಿಸಿದೆ. ಹೀಗಾಗಿ ಟಿಕೆಟ್​ ಸಿಗದೆ ನಿರಾಸೆ ಅನುಭವಿಸಿರುವ ಲಕ್ಷಾಂತರ ಕ್ರಿಕೆಟ್​ ಪ್ರೇಮಿಗಳು ಈಗ ಟಿಕೆಟ್​ಗಾಗಿ ಬೇರೆಬೇರೆ ವೆಬ್​ಸೈಟ್​ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ವೇಳೆ ಅವರು ನಕಲಿ ಟಿಕೆಟ್​ ಖರೀದಿಸುವ ಮತ್ತು ನಕಲಿ ಟಿಕೆಟ್​ ಮಾರಾಟ ವೆಬ್​ಸೈಟ್​ಗಳ ಮೋಸದ ಜಾಲಕ್ಕೆ ಸಿಲುಕುವ ಭೀತಿ ಹೆಚ್ಚಾಗಿದೆ.

"ಬುಕ್​ ಮೈ ಶೋ'ನಲ್ಲಿ ಟಿಕೆಟ್​ಗಳು ಖಾಲಿಯಾಗಿದ್ದರೂ, ಗೂಗಲ್​ ಸರ್ಚ್​ನಲ್ಲಿ ಹುಡುಕಾಟ ನಡೆಸಿದರೆ, ಕಾಳಸಂತೆಯಲ್ಲಿ ಟಿಕೆಟ್​ ಮಾರಾಟ ನಡೆಸುವ ಕೆಲ ವೆಬ್​ಸೈಟ್​ಗಳಲ್ಲಿ ಟಿಕೆಟ್​ಗಳು ಈಗಲೂ ಲಭ್ಯವಿವೆ. ಆದರೆ ಇದಕ್ಕೆ ದುಬಾರಿ ಮೊತ್ತದ ಬೇಡಿಕೆಗಳನ್ನು ಇಡಲಾಗುತ್ತಿದೆ. ಇನ್ನು ಅವುಗಳು ಮಾರಾಟ ನಡೆಸುತ್ತಿರುವ ಟಿಕೆಟ್​ಗಳು ಅಸಲಿಯಾದವುಗಳೇ ಎಂಬುದೂ ಖಚಿತವಿಲ್ಲ. ಕಳೆದ ಐಪಿಎಲ್​ ಸಮಯದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ಟಿಕೆಟ್​ಗಳನ್ನು ಮುಖಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ, ವಿಶ್ವಕಪ್​ ಟಿಕೆಟ್​ಗಳ ಮಾರಾಟ ಮಾಡುವವರಿಗಾಗಿ ಕ್ರಿಕೆಟ್​ ಪ್ರೇಮಿಗಳ ಹುಡುಕಾಟ ಹೆಚ್ಚಾಗಿವೆ. ಈ ವೇಳೆ ಕ್ರಿಕೆಟ್​ ಪ್ರೇಮಿಗಳು ನಕಲಿ ಟಿಕೆಟ್​ಗಳನ್ನು ಖರೀದಿಸಿ ಮೋಸ ಹೋಗುವ ಭೀತಿಯೂ ಅಧಿಕವಾಗಿದೆ. ಈಗಾಗಲೆ ಕೆಲವರು ವಿಶ್ವಕಪ್​ ಟಿಕೆಟ್​ ಮಾರಾಟಕ್ಕಿವೆ ಎಂದು ಪೋಸ್ಟ್​ ಹಾಕಲಾರಂಭಿಸಿದ್ದಾರೆ. ದುಬಾರಿ ಮಾತ್ರವಲ್ಲ ಕಾಳಸಂತೆಯಲ್ಲಿ ಅಗ್ಗದ ಬೆಲೆಗೆ ಟಿಕೆಟ್​ ಮಾರಾಟವಾಗುವ ಟಿಕೆಟ್​ಗಳನ್ನು ಖರೀದಿಸುವುದು ಕೂಡ ಅಪಾಯಕಾರಿ. ಯಾಕೆಂದರೆ ಅವುಗಳು ನಕಲಿಯಾಗಿರುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಕ್ರಿಕೆಟ್​ ಪ್ರೇಮಿಗಳು ಕಾಳಸಂತೆಯಲ್ಲಿ ಟಿಕೆಟ್​ ಖರೀದಿಸಿದರೂ, ಅದು ಅಸಲಿಯೇ ಅಥವಾ ನಕಲಿಯೇ ಎಂಬುದು ಅವರು ಪಂದ್ಯದ ದಿನ ಕ್ರೀಡಾಂಗಣ ಪ್ರವೇಶಿಸಲು ಮುಂದಾಗುವವರೆಗೂ ಸ್ಪಷ್ಟತೆ ಇರುವುದಿಲ್ಲ. ಇನ್ನು ನಕಲಿ ಟಿಕೆಟ್​ ಖರೀದಿಸಿ ಮೋಸ ಹೋದವರು ಪೊಲೀಸ್​ ಠಾಣೆಯ ಮೆಟ್ಟಿಲೇರಲು ಕೂಡ ಸಾಧ್ಯವಾಗುವುದಿಲ್ಲ. ಯಾಕೆಂದರೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಪ್ರಕಾರ, ಭಾರತದಲ್ಲಿ ಕಾಳಸಂತೆಯಲ್ಲಿ ಟಿಕೆಟ್​ ಮಾರಾಟ ಮಾಡುವುದು ಮಾತ್ರವಲ್ಲ, ಖರೀದಿಸುವುದು ಕೂಡ ಕ್ರಿಮಿನಲ್​ ಅಪರಾಧವಾಗಿದೆ.

ಬಿಸಿಸಿಐ ಅವ್ಯವಸ್ಥೆ ಬಗ್ಗೆ ಫ್ಯಾನ್ಸ್​ ಆಕ್ರೋಶ

ವಿಶ್ವಕಪ್​ ಟಿಕೆಟ್​ಗಳ ಮಾರಾಟ ಪ್ರಕ್ರಿಯೆಯನ್ನು ಬಹಳ ತಡವಾಗಿ ಆರಂಭಿಸಿದ್ದಕ್ಕೆ ಮೊದಲೇ ಬಿಸಿಸಿಐ ವಿರುದ್ಧ ಸಿಟ್ಟಾಗಿದ್ದ ಕ್ರಿಕೆಟ್​ ಪ್ರೇಮಿಗಳು ಈಗ ಆನ್​ಲೈನ್​ನಲ್ಲಿ ಟಿಕೆಟ್​ ಖರೀದಿಗೆ ಮುಗಿಬಿದ್ದು ಹಲವು ಗಂಟೆಗಳ ಕಾಲ ವೆಬ್​ಸೈಟ್​ನಲ್ಲಿ ಕಾದರೂ ಟಿಕೆಟ್​ ಸಿಗದೆ ನಿರಾಸೆ ಅನುಭವಿಸಿದ್ದಾರೆ. ಇದರಿಂದ ಬಿಸಿಸಿಐ ವಿರುದ್ಧ ಕ್ರಿಕೆಟ್​ ಪ್ರೇಮಿಗಳ ಆಕ್ರೋಶ ಹೆಚ್ಚಾಗಿದೆ. ಹೆಚ್ಚಿನ ಟಿಕೆಟ್​ಗಳು ಉಳ್ಳವರು ಅಂದರೆ ಕಾಪೋರ್ರೇಟ್​ಗಳ ಪಾಲಾಗಿರುವ ಲಕ್ಷಣಗಳು ಕಾಣಿಸಿವೆ. ಇದರಿಂದ ಸಾಮಾನ್ಯ ಜನರಿಗೆ ಕ್ರೀಡಾಂಗಣದಲ್ಲಿ ಕ್ರಿಕೆಟ್​ ನೋಡುವ ಭಾಗ್ಯವನ್ನು ಬಿಸಿಸಿಐ ಕಲ್ಪಿಸದಿರುವ ಬಗ್ಗೆ ಕಿಡಿಕಾರಲಾಗುತ್ತಿದೆ. ಕರ್ನಾಟಕದ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಇತ್ತೀಚೆಗೆ ಸಾಮಾನ್ಯ ಕ್ರಿಕೆಟ್​ ಪ್ರೇಮಿಗಳ ಪರ ಮಾತನಾಡಿ, ಟಿಕೆಟ್​ ಮಾರಾಟದಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಬಿಸಿಸಿಐ ಅಳವಡಿಸಿಕೊಳ್ಳಬೇಕೆಂದು ಹೇಳಿದ್ದರು.

ಬಿಸಿಸಿಐನಿಂದ ಸಿಹಿ ಸುದ್ದಿ; ಮತ್ತೆ 4 ಲಕ್ಷ ಟಿಕೆಟ್​ ಸೇಲ್​

ವಿಶ್ವಕಪ್​ ಪಂದ್ಯಗಳ ಟಿಕೆಟ್​ಗೆ ಭಾರಿ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ, ಆತಿಥೇಯ ರಾಜ್ಯ ಕ್ರಿಕೆಟ್​ ಸಂಸ್ಥೆಗಳ ಜತೆ ಚರ್ಚಿಸಿ ಸೆಪ್ಟೆಂಬರ್​ 8ರಿಂದ ಮತ್ತೆ 4 ಲಕ್ಷ ಟಿಕೆಟ್​ಗಳನ್ನು ಮಾರಾಟಕ್ಕಿಡಲು ನಿರ್ಧರಿಸಿದೆ. ಕ್ರಿಕೆಟ್​ ಪ್ರೇಮಿಗಳ ಟಿಕೆಟ್​ ಬೇಡಿಕೆಗೆ ಕೊನೆಗೂ ಮಣಿದಿರುವ ಬಿಸಿಸಿಐ, ಅಧಿಕೃತ ವೆಬ್​ಸೈಟ್​ https://tickets.cricketworldcup.com ನಲ್ಲಿ ಟಿಕೆಟ್​ ಖರೀದಿಸಲು ಸೂಚಿಸಿದೆ.