ಕ್ರೀಡೆ

ಇಂದು ಹರಿಣಗಳ ವಿರುದ್ಧ ಅಂತಿಮ ಟಿ20 ಪಂದ್ಯ; ಸರಣಿ ಸಮಬಲದ ತವಕದಲ್ಲಿ ಟೀಮ್​ ಇಂಡಿಯಾ

ಜೊಹಾನ್ಸ್​ರ್ಬಗ್​: ಮಳೆ ಅಡಚಣೆಯ ನಡುವೆ ಹಿನ್ನಡೆ ಎದುರಿಸ ಮುಗ್ಗರಿಸಿದ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದ ಸವಾಲಿಗೆ ಸಜ್ಜಾಗಿದೆ. ವಾಂಡರರ್ಸ್​ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸುವ ಒತ್ತಡವನ್ನೂ ಸೂರ್ಯಕುಮಾರ್​ ಯಾದವ್​ ಪಡೆ ಎದುರಿಸುತ್ತಿದೆ.

ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರೆ, 2ನೇ ಪಂದ್ಯದಲ್ಲಿ ಭಾರತೀಯ ಇನಿಂಗ್ಸ್​ನ ಅಂತ್ಯದಲ್ಲಿ ಕಾಡಿದ ಮಳೆ ಓವರ್​ ಕಡಿತಕ್ಕೆ ಕಾರಣವಾಯಿತು. ನಂತರದಲ್ಲಿ ಭಾರತೀಯ ಬೌಲರ್​ಗಳು ಆರಂಭದಲ್ಲಿ ಹೆಚ್ಚಿನ ರನ್​ಬಿಟ್ಟುಕೊಟ್ಟ ಕಾರಣ ಭಾರತ ಪರದಾಡುವಂತಾಯಿತು. ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಹೆಚ್ಚಿನ ರನ್​ ಬಿಟ್ಟುಕೊಟ್ಟರೆ, ಮುಕೇಶ್​ ಕುಮಾರ್​ ವಿಕೆಟ್​ ಕಬಳಿಸಿದ ನಡುವೆಯೂ ರನ್​ಗೆ ಕಡಿವಾಣ ಹಾಕಲಿಲ್ಲ. ವೇಗದ ಬೌಲಿಂಗ್​ ವಿಭಾಗದಲ್ಲಿ ಅನುಭವಿಗಳ ಕೊರತೆಯೂ ಭಾರತವನ್ನು ಕಾಡಿತು.

ಇನ್ನು ಮಳೆ ನಂತರ ಒದ್ದೆಯಾಗಿದ್ದ ಮೈದಾನದಿಂದಾಗಿ ಸ್ಪಿನ್ನರ್​ಗಳು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಫ್ರಿಕಾದ ಸ್ಪಿನ್ನರ್​ ತಬರೇಜ್​ ಶಮ್ಸಿಗೆ ಸಿಕ್ಕಷ್ಟು ನೆರವು ಭಾರತೀಯ ಸ್ಪಿನ್ನರ್​ಗಳಿಗೆ ಸಿಗದಂತಾಯಿತು.

ಬಹುತೇಕ ಇದೇ ತಂಡದೊಂದಿಗೆ ಭಾರತ ಇತ್ತೀಚೆಗೆ ತವರಿನಲ್ಲಿ ಆಸ್ಟ್ರೆಲಿಯಾ ವಿರುದ್ಧ 4-1ರಿಂದ ಸರಣಿ ಗೆದ್ದಿತ್ತು. ಇದೀಗ ಹರಿಣಗಳ ವಿರುದ್ಧ ಸರಣಿ ಗೆಲುವು ಸಾಧಿಸಲು ಅವಕಾಶವಿಲ್ಲದಿದ್ದರೂ, ಸಮಬಲದ ಸಮಾಧಾನ ಕಾಣಲು ಪ್ರಯತ್ನಿಸಬಹುದಾಗಿದೆ. ಸವಾಲಿನ ಪ್ರವಾಸದ ಆರಂಭದಲ್ಲೇ ಸರಣಿ ಸೋಲುಂಡರೆ ಭಾರತ ಮಾನಸಿಕ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಅದರಿಂದ ಪಾರಾಗಿ, ಮುಂಬರುವ ಏಕದಿನ-ಟೆಸ್ಟ್​ ಸರಣಿಗಳಿಗೂ ಮಾನಸಿಕ ಬಲ ತುಂಬಲು ಯುವ ಭಾರತ ಹೋರಾಡಬೇಕಿದೆ.

ಬೌಲರ್​ಗಳ ಅಸ್ಥಿರ ನಿರ್ವಹಣೆ

ಟಿ20 ವಿಶ್ವಕಪ್​ಗೆ ಮುನ್ನ ಭಾರತ ತಂಡ ಬೌಲಿಂಗ್​ ವಿಭಾಗದಲ್ಲಿ ಹೆಚ್ಚಿನ ಪ್ರಯೋಗ ನಡೆಸುತ್ತಿದೆ. ಆದರೆ ಯುವ ಬೌಲರ್​ಗಳ ಅಸ್ಥಿರ ನಿರ್ವಹಣೆ ಅವರಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹಿನ್ನಡೆಯಾಗಿದೆ. ಆಸೀಸ್​ ವಿರುದ್ಧ ಬೆಂಗಳೂರಿನಲ್ಲಿ ನಡೆದ ಕೊನೇ ಟಿ20 ಪಂದ್ಯದ ಕೊನೇ ಓವರ್​ನಲ್ಲಿ ಅತ್ಯುತ್ತಮ ಬೌಲಿಂಗ್​ ಪ್ರದರ್ಶಿಸಿದ್ದ ಅರ್ಷದೀಪ್​, ಇತರ ಪಂದ್ಯಗಳಲ್ಲಿ ಅದೇ ಬಿಗಿ ದಾಳಿ ಸಂಟಿಸಿಲ್ಲ. ಇನ್ನು ಮುಕೇಶ್​ ವಿಕೆಟ್​ ಕಬಳಿಸುತ್ತಿದ್ದರೂ, ರನ್​ಗೆ ನಿಯಂತ್ರಣ ಹೇರುವಲ್ಲಿ ಶಕ್ತರಾಗಿಲ್ಲ.

ಗಮನಸೆಳೆಯುತ್ತಿದೆ ರಿಂಕು ಆಟ

ಇತ್ತೀಚೆಗೆ ಭಾರತ ತಂಡಕ್ಕೆ ಕಾಲಿಟ್ಟ ಆಟಗಾರರಲ್ಲಿ ಗಮನಾರ್ಹ ಮತ್ತು ಸ್ಥಿರ ನಿರ್ವಹಣೆ ತೋರುತ್ತಿರುವ ಆಟಗಾರರಲ್ಲಿ ರಿಂಕು ಸಿಂಗ್​ ಪ್ರಮುಖರು. ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡಕ್ಕೆ ಆಧಾರವಾಗಿ ನಿಲ್ಲುತ್ತಿರುವ ರಿಂಕು ಸಿಂಗ್​, ಟಿ20 ವಿಶ್ವಕಪ್​ಗೂ ಫಿನಿಷರ್​ ಪಾತ್ರಕ್ಕೆ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ.

ಟೀಮ್​ ನ್ಯೂಸ್​:

ಭಾರತ: ಅನಾರೋಗ್ಯದಿಂದಾಗಿ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಋತುರಾಜ್​ ಗಾಯಕ್ವಾಡ್​ ಫಿಟ್​ ಆದರೆ, ಭಾರತಕ್ಕೆ ಆರಂಭಿಕರ ಆಯ್ಕೆ ತಲೆನೋವು ಎದುರಾಗಲಿದೆ. ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ ಶುಭಮಾನ್​ ಗಿಲ್-ಯಶಸ್ವಿ ಜೈಸ್ವಾಲ್​ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಎಡಗೈ&ಬಲಗೈ ಕಾಂಬಿನೇಷನ್​ ಉಳಿಸಿಕೊಳ್ಳಲು ಗಿಲ್​ ಹೊರಬೀಳಬಹುದು. ಕುಲದೀಪ್​ ಯಾದವ್​ ಬದಲಿಗೆ ವಿಶ್ವ ನಂ. 1 ಟಿ20 ಸ್ಪಿನ್ನರ್​ ರವಿ ಬಿಷ್ಣೋಯಿ ಮತ್ತೆ ಅವಕಾಶ ಪಡೆಯಬಹುದು. ದೀಪಕ್​ ಚಹರ್​ ಇನ್ನೂ ತಂಡ ಕೂಡಿಕೊಂಡಿರದ ಕಾರಣ ವೇಗದ ಬೌಲಿಂಗ್​ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ.

ದಕ್ಷಿಣ ಆಫ್ರಿಕಾ: ಸರಣಿಯ ಮೊದಲೆರಡು ಪಂದ್ಯಗಳಿಗೆ ಮಾತ್ರ ತಂಡದ ಭಾಗವಾಗಿದ್ದ ವೇಗಿಗಳಾದ ಗೆರಾಲ್ಡ್​ ಕೋಟ್​ಜೀ, ಮಾಕೋರ್ ಜಾನ್ಸೆನ್​ ತಂಡವನ್ನು ತೊರೆದಿದ್ದಾರೆ. ಜತೆಗೆ ಲುಂಗಿ ಎನ್​ಗಿಡಿ ಗಾಯಾಳು ಪಟ್ಟಿ ಸೇರಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಕೂಡ ಈ ಬಾರಿ ಅನನುಭವಿ ವೇಗದ ಬೌಲಿಂಗ್​ ವಿಭಾಗದೊಂದಿಗೆ ಕಣಕ್ಕಿಳಿಯಬೇಕಾದ ಸವಾಲು ಎದುರಿಸುತ್ತಿದೆ. ಕೋಟ್​ಜೀ ಸ್ಥಾನಕ್ಕೆ ಬಾರ್ಟ್​ಮನ್​/ರ್ಬಗರ್​ ನಡುವೆ ಪೈಪೋಟಿ ಇದೆ. ಜಾನ್ಸೆನ್​ ಸ್ಥಾನದಲ್ಲಿ ಡೊನೊವನ್​ ಫೆರೀರ ಆಡುವ ನಿರೀೆ ಇದೆ.

ಆರಂಭ: ರಾತ್ರಿ 8.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಭಾರತಕ್ಕೆ ನೆಚ್ಚಿನ ತಾಣ

ದಕ್ಷಿಣ ಆಫ್ರಿಕಾದಲ್ಲಿ ಜೊಹಾನ್ಸ್​ರ್ಬಗ್​ ಭಾರತದ ಪಾಲಿಗೆ ನೆಚ್ಚಿನ ತಾಣವೆನಿಸಿದೆ. ಇಲ್ಲಿ ಮೂರೂ ಕ್ರಿಕೆಟ್​ ಪ್ರಕಾರಗಳಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಟಿ20ಯಲ್ಲೂ 3 ಜಯ, 1 ಸೋಲಿನ ದಾಖಲೆ ಹೊಂದಿದೆ. ಇನ್ನು ಮಳೆ ಭೀತಿ ಇಲ್ಲದ ಕಾರಣ ಸರಣಿಯಲ್ಲಿ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ನಡೆಯುವ ನಿರೀೆ ಇದೆ.