ಕ್ರೀಡೆ

6 ತಿಂಗಳ ಬಳಿಕ ಮೀರಾ ಮರಳಿ ಕಣಕ್ಕೆ; ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆ ಖಚಿತಪಡಿಸಿಕೊಳ್ಳುವ ಗುರಿ

ಫುಕೆಟ್​ (ಥಾಯ್ಲೆಂಡ್​): ಟೋಕಿಯೊ ಒಲಿಂಪಿಕ್ಸ್​ ರಜತ ವಿಜೇತೆ ಹಾಗೂ ವೇಟ್​ಲಿಫ್ಟಿಂಗ್​ ತಾರೆ ಮೀರಾಬಾಯಿ ಚಾನು ಸ್ಪರ್ಧಾಕಣಕ್ಕೆ ಮರಳಲು ಸಜ್ಜಾಗಿದ್ದಾರೆ. ಗಾಯದಿಂದಾಗಿ ಕಳೆದ ಆರು ತಿಂಗಳಿನಿಂದ ಯಾವುದೇ ಕೂಟದಲ್ಲಿ ಸ್ಪರ್ಧಿಸದ ಮೀಬಾಯಿ, ಸೋಮವಾರದಿಂದ ನಡೆಯಲಿರುವ ಐಡಬ್ಲ್ಯುಎ್​ ವಿಶ್ವಕಪ್​ನಲ್ಲಿ ಭಾಗವಹಿಸಲಿದ್ದು, ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಖಚಿತಪಡಿಸಿಕೊಳ್ಳಲು ಹೋರಾಡಲಿದ್ದಾರೆ.

ಈ ವಿಶ್ವಕಪ್​ ವೇಟ್​ಲಿಫ್ಟಿಂಗ್​ನಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆಯ ಕೊನೆಯ ಸ್ಪರ್ಧೆಯಾಗಿದೆ. ಜತೆಗೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ವೇಟ್​ಲ್ಟಿರ್​ಗಳಿಗೆ ಇಲ್ಲಿ ಸ್ಪರ್ಧೆಯೂ ಕಡ್ಡಾಯವಾಗಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ಸ್ಪರ್ಧಿಸುವ ವೇಳೆ ಮೀರಾಬಾಯಿ ಗಾಯಗೊಂಡಿದ್ದರು.

ಮಹಿಳೆಯರ 49 ಕೆಜಿ ವಿಭಾಗದ ಒಲಿಂಪಿಕ್ಸ್​ ಅರ್ಹತಾ ರ್ಯಾಂಕಿಂಗ್​ನಲ್ಲಿ 29 ವರ್ಷದ ಮೀರಾ ಸದ್ಯ 2ನೇ ಸ್ಥಾನದಲ್ಲಿದ್ದಾರೆ. ಮಣಿಪುರದ ಮೀರಾಬಾಯಿ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸುವುದು ಈಗಾಗಲೆ ಬಹುತೇಕ ಖಚಿತವೆನಿಸಿದೆ. ಈ ವಿಶ್ವಕಪ್​ ಮೀರಾ ಸ್ಪರ್ಧೆಗೆ ಅಧಿಕೃತ ಮುದ್ರೆಯನ್ನೂ ಒತ್ತಲಿದೆ.

2024ರ ಒಲಿಂಪಿಕ್ಸ್​ ಅರ್ಹತಾ ನಿಯಮದ ಪ್ರಕಾರ, 2023ರ ವಿಶ್ವ ಚಾಂಪಿಯನ್​ಷಿಪ್​ ಮತ್ತು 2024ರ ವಿಶ್ವಕಪ್​ನಲ್ಲಿ ಸ್ಪರ್ಧೆ ಕಡ್ಡಾಯವಾಗಿದೆ. ವಿಶ್ವಕಪ್​ ನಂತರದಲ್ಲಿ ಆಯಾ ದೇಹತೂಕ ವಿಭಾಗದ ಅಗ್ರ 10 ವೇಟ್​ಲಿಫ್ಟರ್​ಗಳು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಖಚಿತಪಡಿಸಿಕೊಳ್ಳಲಿದ್ದಾರೆ. ವೈಯಕ್ತಿಕ ಶ್ರೇಷ್ಠ 207 ಕೆಜಿ ಭಾರ ಎತ್ತಿರುವ ಮೀರಾ, ವಿಶ್ವಕಪ್​ನಲ್ಲಿ 185 ಕೆಜಿ ಆರಂಭಿಕ ಭಾರ ಎತ್ತುವುದಾಗಿ ಎಂಟ್ರಿ ಮಾಡಿಸಿಕೊಂಡಿದ್ದಾರೆ. ಇದರಿಂದ ಅವರು ಬಿ ಗ್ರೂಪ್​ನಲ್ಲಿ ಸ್ಪರ್ಧಿಸಬೇಕಾಗಿದ್ದು, ಪದಕ ಸ್ಪರ್ಧೆಯಿಂದ ಬಹುತೇಕ ಹೊರಗುಳಿದಂತಾಗಿದೆ.

ಕಾಮನ್ವೆಲ್ತ್​ ಗೇಮ್ಸ್​ ರಜತ ವಿಜೇತೆ ಬಿಂದ್ಯಾರಾಣಿ ದೇವಿ ವಿಶ್ವಕಪ್​ನಲ್ಲಿ ಸ್ಪರ್ಧಿಸಲಿರುವ ಮತ್ತೋರ್ವ ಭಾರತೀಯರಾಗಿದ್ದಾರೆ. ಆದರೆ ಅವರು ಸ್ಪರ್ಧಿಸುತ್ತಿರುವ 55 ಕೆಜಿ ವಿಭಾಗದ ಸ್ಪರ್ಧೆ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇರುವುದಿಲ್ಲ.