ಕ್ರೀಡೆ

ರಾಜಕಾರಣಕ್ಕೂ ಹೆಸರಾಗಿದ್ದ ಆ ರೆಸಾರ್ಟ್​ ಒತ್ತುವರಿ ಮಾಡಿಕೊಂಡಿದ್ದ ಜಾಗ ತೆರವು; ಅಲ್ಲೇ ಕ್ರೀಡಾಸಮುಚ್ಚಯ ನಿರ್ಮಾಣವಾಗಲಿ ಎಂದು ಸಿಎಂಗೆ ಪತ್ರ

ಬೆಂಗಳೂರು: ಪಕ್ಷಾಂತರ ರಾಜಕಾರಣ ಚುರುಕುಗೊಂಡ ಸಮಯದಲ್ಲೆಲ್ಲ ಒಂದು ರೆಸಾರ್ಟ್​ ಹೆಸರು ಆಗಾಗ ಕೇಳಿಬರುತ್ತದೆ. ಅದೇ ರೆಸಾರ್ಟ್​ನಿಂದ ಒತ್ತುವರಿ ಮಾಡಿಕೊಳ್ಳಲಾಗಿದ್ದ ಎಕರೆಗಟ್ಟಲೆ ಜಾಗವನ್ನು ಈಗಾಗಲೇ ತೆರವು ಮಾಡಲಾಗಿದ್ದು, ಮುಂದೆ ಅದೇ ಜಾಗದಲ್ಲಿ ಕ್ರೀಡಾಸಮುಚ್ಚಯ ನಿರ್ಮಾಣವಾಗಲಿ ಎಂದು ಈಗ ಸರ್ಕಾರವನ್ನು ಒತ್ತಾಯಿಸಲಾಗಿದೆ.

ಬಿಡದಿಯಲ್ಲಿರುವ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಕೋರ್ಟ್‍ ಆದೇಶದಂತೆ ರಾಮನಗರ ಜಿಲ್ಲಾಡಳಿತ ತೆರವು ಮಾಡಿದ್ದು, ಅದನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಶಾಲವಾಗಿರುವ ಆ ಜಾಗ ಕ್ರೀಡಾ ಚಟುವಟಿಕೆಗೆ ಯೋಗ್ಯವಾಗಿದೆ. ಆದ್ದರಿಂದ ಅದೇ ಸ್ಥಳವನ್ನು ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ನೀಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್​ ಕ್ರೀಡಾಕೂಟ, ಏಷ್ಯನ್​ ಗೇಮ್ಸ್​ ಸೇರಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ವಿಶಾಲ ಪ್ರದೇಶದಲ್ಲಿ ಬೃಹತ್ತಾದ ಕ್ರೀಡಾ ಸಮುಚ್ಚಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕ್ರೀಡಾ ಇಲಾಖೆ ಇದಕ್ಕಾಗಿ ವಿಶಾಲ ನಿವೇಶನವನ್ನೂ ಹುಡುಕುತ್ತಿದೆ. ಪ್ರಸ್ತುತ ರಾಮನಗರದ ಬಿಡದಿಯಲ್ಲಿ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ತೆರವು ಮಾಡಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಗಾಲ್ಫ್​ ಕೋರ್ಟ್‍ ಕೂಡ ಈ ಸ್ಥಳದಲ್ಲಿದೆ. ಸಮತಟ್ಟಾಗಿರುವ ಈ ವಿಶಾಲ ಪ್ರದೇಶ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಯೋಗ್ಯವಾಗಿದೆ. ಬೆಂಗಳೂರಿಗೂ ಈ ಪ್ರದೇಶ ಸಮೀಪದಲ್ಲಿದೆ. ಆದ್ದರಿಂದ 77 ಎಕರೆ 18 ಗುಂಟೆ ಈ ಪ್ರದೇಶವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಎಂದು ಸಚಿವರು ಸಿಎಂ ಹಾಗೂ ಕಂದಾಯ ಸಚಿವರಿಗೆ ಪತ್ರಮುಖೇನ ಕೋರಿದ್ದಾರೆ.