ಚಂಡೀಗಢ: ಕೋವಿಡ್-19ರಿಂದ ಸಂಪೂರ್ಣ ಚೇತರಿಸಿಕೊಂಡಿರುವ ಭಾರತದ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಭಾನುವಾರ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಆದರೆ, ಆಕ್ಸಿಜನ್ ನೀಡುವುದನ್ನು ಮುಂದುವರಿಸಲಾಗಿದೆ. 91 ವರ್ಷದ ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರವಾಗಿದ್ದು,ಅವರ ಪತ್ನಿ ನಿರ್ಮಲ್ ಕೌರ್ ಅವರಿಗೆ ಐಸಿಯೂವಿನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕುಟುಂಬ ಸದಸ್ಯರ ಮನವಿ ಮೇರೆಗೆ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮೊಹಾಲಿಯಲ್ಲಿರುವ ಫೋಟಿರ್ಸ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಸೋಮವಾರ ಮಿಲ್ಖಾ ಸಿಂಗ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಕೋವಿಡ್ನಿಂದ ಬಳಲುತ್ತಿದ್ದ ಅವರ ಪತ್ನಿಯನ್ನು ಬುಧವಾರ ಆಸ್ಪತ್ರೆಗೆ ಸೇರಿಸಲಾಗಿದೆ. ಮಿಲ್ಖಾ ಸಿಂಗ್ ಪುತ್ರ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಪಾಲಕರ ಆರೋಗ್ಯ ವಿಚಾರಿಸಿಕೊಳ್ಳಲು ದುಬೈನಿಂದ ಚಂಡೀಗಢಕ್ಕೆ ಆಗಮಿಸಿದ್ದಾರೆ. ಜೀವ್ ಅವರ ಸಹೋದರಿ, ವೈದ್ಯಯೂ ಆಗಿರುವ ಮೋನಾ ಸಿಂಗ್ ಕೂಡ ಅಮೆರಿಕದಿಂದ ವಾಪಸಾಗಿದ್ದಾರೆ.
ಮಿಲ್ಖಾ ಸಿಂಗ್ಗೆ ಮನೆಗೆಲಸದವರಿಂದ ಸೋಂಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ದಿಗ್ಗಜ ಮಿಲ್ಖಾ ಸಿಂಗ್, 4 ಬಾರಿ ಏಷ್ಯಾಡ್ ಚಾಂಪಿಯನ್ ಆಗಿದ್ದರು, 1958ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ವರ್ಣ ಗೆದ್ದಿದ್ದರೆ, 1960ರ ರೋಮ್ ಒಲಿಂಪಿಕ್ಸ್ನಲ್ಲಿ 400 ಮೀಟರ್ ಓಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 1956 ಹಾಗೂ 1964ರ ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿನಿಧಿಸಿದ್ದಾರೆ. 1959ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಭಾಜನರಾಗಿದ್ದಾರೆ.