ಕ್ರೀಡೆ

ಈ ರೀತಿ ಸೋಲಲು ಸೇನೆಯಿಂದ ತರಬೇತಿ ಬೇರೆ ಕೇಡು; ಹೀನಾಯ ಟ್ರೋಲ್​ಗೆ ಗುರಿಯಾದ ಪಾಕಿಸ್ತಾನ

ಡಲ್ಲಾಸ್​: ಇಲ್ಲಿನ ಗ್ರ್ಯಾಂಡ್​ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ 11ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕ್ರಿಕೆಟ್​ ಶಿಶು ಯುಎಸ್​ಎ ಗೆದ್ದು ಬೀಗಿದ್ದು, ಅತಿಥೇಯರು ಪ್ರವಾಸಿ ತಂಡದ ಎದುರು ಗೆದ್ದು ಬೀಗಿದ್ದಾರೆ. ಕ್ರಿಕೆಟ್​ ಶಿಶು ಎದುದರು ಪಾಕಿಸ್ತಾನ ಸೋಲುಂಡಿದ್ದು ಹೀನಾಯವಾಗಿ ಟ್ರೋಲ್​ ಮಾಡಲಾಗುತ್ತಿದೆ. ಅದು ಎಷ್ಟರಮಟ್ಟಿಗೆ ಎಂದರೆ ಆಟಗಾರರ ವೈಯಕ್ತಿಕ ವಿಚಾರಗಳನ್ನು ಕೆದಕಿ ಪಾಕ್​ ಅಭಿಮಾನಿಗಳು ತಮ್ಮ ತಂಡದ ಆಟಗಾರರನ್ನು ಟ್ರೋಲ್​ ಮಾಡುತ್ತಿದ್ದಾರೆ.

ಇತ್ತ ಪಾಕಿಸ್ತಾನ ಯುಎಸ್​ಎ ವಿರುದ್ಧ ಸೋತ ಬಳಿಕ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿದ್ದು, ಭಾರತದ ವಿರುದ್ಧದ ಪಂದ್ಯದಲ್ಲಿ ಸೋತರೆ ಸೂಪರ್​-8 ಪ್ರವೇಶಿಸದೆ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ. ಯುಎಸ್​ ತಾನು ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿದ್ದು, ಇದು ಪಾಕಿಸ್ತಾನ ಪಾಲಿಗೆ ಮುಳುವಾಗಿದೆ.

ಚುಟುಕು ವಿಶ್ವಸಮರ ಶುರುವಾಗುವುದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರರು ಸೇನೆಯಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಯುಎಸ್​ಎ ವಿರುದ್ಧ ಸೋಲಿನ ಬಳಿಕ ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಯುಎಸ್​ಎ ವಿರುದ್ಧ ಸೋಲಲು ನಿಮಗೆ ಸೇನೆಯಿಂದ ತರಬೇತಿ ಬೇಕಿತ್ತಾ ಎಂದು ಟ್ರೋಲ್​ ಮಾಡಲಾಗುತ್ತಿದೆ.

ಕ್ರಿಕೆಟ್​ ಶಿಶುಗಳ ವಿರುದ್ಧ ಸೋಲಲು ನಿಮಗೆ ಮಿಲಿಟರಿ ಕಮಾಂಡೋಗಳಿಂದ ಟ್ರೈನಿಂಗ್​ ಪಡೆಯುವ ಅವಶ್ಯಕತೆ ಇರಲಿಲ್ಲ. ಈ ರೀತಿಯ ಆಟವಾಡುವ ಬದಲು ಸುಮ್ಮನೇ ಮನೆಯಲ್ಲಿರುವುದೇ ವಾಸಿ. ಎಲ್ಲರೂ ಕ್ರಿಕೆಟ್​ ಟೂರ್ನಿಗಳಲ್ಲಿ ಆಡಿದರೆ ಪಾಕಿಸ್ತಾನದವರು ಮಾತ್ರ ಸೇನೆಯಲ್ಲಿ ತರಬೇತಿ ಪಡೆಯುತ್ತಾರೆ ಎಂದು ಕ್ರೀಡಾಭಿಮಾನಿಗಳು ಲೇವಡಿಯಾಡಿದ್ದಾರೆ.