ಕ್ರೀಡೆ

ಇಂದಿನಿಂದ ಬೆಂಗಳೂರಿನಲ್ಲಿ ವಾಲಿಬಾಲ್​ ಕ್ಲಬ್ ವಿಶ್ವ​ ಚಾಂಪಿಯನ್​ಷಿಪ್​

ಬೆಂಗಳೂರು: ಪುರುಷರ ವಾಲಿಬಾಲ್​ ಕ್ಲಬ್​ ವಿಶ್ವ ಚಾಂಪಿಯನ್​ಷಿಪ್​ ಬುಧವಾರದಿಂದ 5 ದಿನಗಳ ಕಾಲ ಉದ್ಯಾನನಗರಿಯಲ್ಲಿ ನಡೆಯಲಿದ್ದು, ಅಹಮದಾಬಾದ್​ ಡಿಫೆಂಡರ್ಸ್​ ತಂಡ ಆತಿಥೇಯ ಭಾರತವನ್ನು ಪ್ರತಿನಿಧಿಸಲಿದೆ. ಭಾರತೀಯ ವಾಲಿಬಾಲ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೂರ್ನಿಗೆ ಆತಿಥ್ಯ ವಹಿಸುವ ಅವಕಾಶ ಒಲಿದುಬಂದಿದೆ.

ವಿಶ್ವದ 6 ಪ್ರಮುಖ ವಾಲಿಬಾಲ್​ ಕ್ಲಬ್​ಗಳು ಭಾಗವಹಿಸುತ್ತಿರುವ ಟೂರ್ನಿಯ ಪಂದ್ಯಗಳು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ರುಪೇ ಪೆಮ್​ ವಾಲಿಬಾಲ್​ ಲೀಗ್​ನಲ್ಲಿ ಪ್ರಶಸ್ತಿ ಗೆದ್ದ ಆಧಾರದಲ್ಲಿ ಅಹಮದಾಬಾದ್​ ಡಿಫೆಂಡರ್ಸ್​ ತಂಡ ಟೂರ್ನಿಗೆ ಅರ್ಹತೆ ಪಡೆದಿದೆ. ಕರ್ನಾಟಕದ ಅಶ್ವಲ್​ ರೈ, ಸೃಜನ್​ ಶೆಟ್ಟಿ ಅವರನ್ನು ಒಳಗೊಂಡ ಅಹಮದಾಬಾದ್​ ತಂಡ ಎ ಗುಂಪಿನಲ್ಲಿ ಹಾಲಿ ಚಾಂಪಿಯನ್​ ಇಟಲಿಯ ಸರ್​ ಸಿಕೊಮಾ ಪೆರುಗಿಯಾ ಮತ್ತು ಬ್ರೆಜಿಲ್​ನ ಮಿನಾಸ್​ ಟೆನಿಸ್​ ಕ್ಲಬ್​ ತಂಡಗಳನ್ನು ಎದುರಿಸಲಿದೆ.

ಟರ್ಕಿಯ ಹಾಲ್ಕ್​ಬ್ಯಾಂಕ್​ ಸ್ಪೋರ್​ ಕುಲುಬೆ, ಬ್ರೆಜಿಲ್​ ಸಡಾ ಕ್ರುಜೈರೊ ವೊಲೆ ಮತ್ತು ಜಪಾನ್​ನ ಸುಂಟೋರಿ ಸನ್ಬರ್ಡ್ಸ್​ ಬಿ ಗುಂಪಿನಲ್ಲಿವೆ. ಪಂದ್ಯಗಳು ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ ನೇರಪ್ರಸಾರ ಕಾಣಲಿವೆ.