ಕ್ರೀಡೆ

ಅಶಿಸ್ತು, ದುರ್ವತನೆ... ಪೃಥ್ವಿ ಶಾ ಹೇಳಿಕೆಗೆ ಮುಂಬೈ ಕ್ರಿಕೆಟ್ ಸಂಸ್ಥೆ ಖಡಕ್ ತಿರುಗೇಟು | Prithvi Shaw

Prithvi Shaw: ಇತ್ತೀಚೆಗಷ್ಟೇ ತಮ್ಮ ಕ್ರಿಕೆಟ್​ ವೃತ್ತಿಯಲ್ಲಿ ಆದ ಕೆಲವು ಕಹಿ ಘಟನೆಗಳನ್ನು ನೆನದು ಭಾವುಕರಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​ ಪೃಥ್ವಿ ಷಾ, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮನದಾಳದ ಮಾತನ್ನು ಬರಹದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಅಂದಿನಿಂದಲೂ ಪೃಥ್ವಿ ವಿಚಾರ ಕ್ರಿಕೆಟ್​ ಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ವಿಜಯ್ ಹಜಾರೆ ಟ್ರೋಫಿಯಿಂದ ತಮ್ಮನ್ನು ಕೈಬಿಟ್ಟಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಷಾ ಹೇಳಿಕೆಗೆ ಮುಂಬೈ ಕ್ರಿಕೆಟ್​ ಅಸೋಸಿಯೇಷನ್ ತಿರುಗೇಟು ನೀಡಿದೆ.

"ಪೃಥ್ವಿ ಶಾ ಕ್ರಿಕೆಟ್​ ತರಬೇತಿ ಅವಧಿಗಳಿಗೆ ಸರಿಯಾಗಿ ಬರುತ್ತಿರಲಿಲ್ಲ. ಅವರ ಆಶಿಸ್ತಿನ ನಡೆ, ದುರ್ವತನೆಯಿಂದಲೇ ತಂಡ ಶಾರನ್ನು ಕೈಬಿಟ್ಟಿದೆ ಹೊರತು ಇನ್ಯಾವ ಕಾರಣಗಳಿಗೂ ಅಲ್ಲ. ಅಕ್ಟೋಬರ್‌ನಲ್ಲಿ ರಣಜಿ ಟ್ರೋಫಿ ತಂಡದಿಂದ ಹೊರಗುಳಿದ ಬಳಿಕ ಪೃಥ್ವಿ ಯಾವುದೇ ಫಿಟ್ನೆಸ್​ ತರಬೇತಿಗೂ ಹಾಜರಾಗಿಲ್ಲ" ಎಂದು ಎಂಸಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾವು 10 ಫೀಲ್ಡರ್‌ಗಳೊಂದಿಗೆ ಪಂದ್ಯವನ್ನಾಡುತ್ತಿದ್ದೆವು, ಈ ವೇಳೆ ಬಾಲ್​ ಅವರ ಪಕ್ಕದಲ್ಲಿಯೇ ಹೋಗುತ್ತಿದ್ದರೂ ಅವರಿಂದ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಅವರ ಫಿಟ್ನೆಸ್​. ಬ್ಯಾಟಿಂಗ್​ನಲ್ಲಿಯೂ ಈ ಸಮಸ್ಯೆ ಕಾಡುತ್ತಿತ್ತು. ಪೃಥ್ವಿ ಫಿಟ್ನೆಸ್, ಅಶಿಸ್ತು ಮತ್ತು ವರ್ತನೆ ಕಳಪೆಯಾಗಿದೆ. ಈ ಬಗ್ಗೆ ಟೀಮ್​ನ ಹಿರಿಯ ಆಟಗಾರರು ಸಹ ದೂರು ನೀಡಿದ್ದಾರೆ" ಎಂದರು.

"ಒಂದು ಅರ್ಥ ಮಾಡಿಕೊಳ್ಳಿ, ನಿಮಗೆ ಪೂರ್ತಿ ಆರ್ಥವಾಗಲಿಲ್ಲ. ಎಂದರೆ ದಯವಿಟ್ಟು ಮಾತನಾಡಬೇಡಿ. ಅನೇಕರು ಅರ್ಧದಷ್ಟು ಸತ್ಯಗಳೊಂದಿಗೆ ಪೂರ್ಣ ಅಭಿಪ್ರಾಯಗಳನ್ನು ಹೊಂದಿರುತ್ತಾರೆ" ಎಂದು ಇತ್ತೀಚೆಗೆ ಸ್ಟೋರಿ ಹಂಚಿಕೊಂಡಿದ್ದ ಪೃಥ್ವಿಗೆ ಒಂದೇ ವಾಕ್ಯದಲ್ಲಿ ಪ್ರತಿಕ್ರಿಯಿಸಿದ ಎಂಸಿಎ ಅಧಿಕಾರಿ, "ಪದೇ ಪದೇ ಅಶಿಸ್ತು ತೋರುತ್ತಿರುವ ಶಾಗೆ ಅವರೇ ಶತ್ರು ಬಿಟ್ಟರೆ ಬೇರಾರು ಅಲ್ಲ" ಎಂದು ತಿರುಗೇಟು ನೀಡಿದ್ದಾರೆ.

ಅಂದು ಪೃಥ್ವಿ ಹೇಳಿದ್ದೇನು?

ಈ ಎಲ್ಲಾ ಬೆಳವಣಿಗೆಯಿಂದ ತತ್ತರಿಸಿರುವ ಪೃಥ್ವಿ, ತಮಗೆ ಎದುರಾದ ಪರಿಸ್ಥಿಯ ಬಗ್ಗೆ ಕಡೆಗೂ ಮೌನ ಮುರಿದಿದ್ದಾರೆ. “ಹೇಳು ದೇವರೇ ನಾನಿನ್ನು ಏನೇನು ನೋಡಬೇಕು. 65 ಇನ್ನಿಂಗ್ಸ್, 55.7ರ ಸರಾಸರಿಯಲ್ಲಿ 126 ಸ್ಟ್ರೈಕ್ ರೇಟ್‌ನೊಂದಿಗೆ 3,399 ರನ್ ಗಳಿಸಿದರೂ ನಾನು ಇನ್ನೂ ಬೆಸ್ಟ್​ ಸಾಲಿನಲ್ಲಿಲ್ಲ. ಏನೇ ಆದರೂ ನಿಮ್ಮ ಮೇಲೆ ನಾನು ಅಪಾರ ನಂಬಿಕೆ ಇಡುತ್ತೇನೆ ಮತ್ತು ಜನರು ನನ್ನನ್ನು ಈಗಲೂ ನಂಬುತ್ತಾರೆ ಎಂದು ಭಾವಿಸುವೆ. ಕಾರಣ, ಖಂಡಿತ ನಾನು ವಾಪಾಸ್​ ಬರುತ್ತೇನೆ. ಓಂ ಸಾಯಿ ರಾಮ್” ಎಂದು ಶಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).