ಪಟನಾ: ನಾಯಕ ಮಯಾಂಕ್ ಅಗರ್ವಾಲ್ (105 ರನ್, 131 ಎಸೆತ, 12 ಬೌಂಡರಿ) ಸಿಡಿಸಿದ ಆಕರ್ಷಕ ಶತಕದ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಬಿಹಾರ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದ ರಾಜ್ಯ ತಂಡಕ್ಕೆ ಪಂದ್ಯದಲ್ಲಿ ಕನಿಷ್ಠ 3 ಅಂಕ ಖಚಿತಗೊಂಡಿದ್ದು, 4ನೇ ಹಾಗೂ ಅಂತಿಮ ದಿನದಾಟದಲ್ಲಿ ಗೆಲುವು ದಾಖಲಿಸುವ ಅವಕಾಶವೂ ಸೃಷ್ಟಿಯಾಗಿದೆ.
ಮೊಯಿನ್-ಉಲ್-ಹಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಸೋಮವಾರ ಆಟ ತಡವಾಗಿ ಆರಂಭಗೊಂಡಾಗ ವಿಕೆಟ್ ನಷ್ಟವಿಲ್ಲದೆ 16 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡ, ದಿನದಂತ್ಯಕ್ಕೆ 51 ಓವರ್ಗಳಲ್ಲಿ 7 ವಿಕೆಟ್ಗೆ 287 ರನ್ ಗಳಿಸಿದೆ. ಕರ್ನಾಟಕ ಸದ್ಯ 144 ರನ್ ಮುನ್ನಡೆಯಲ್ಲಿದೆ. ದಿನದ ಕೊನೇ ಓವರ್ನಲ್ಲಿ 5 ಎಸೆತಗಳ ಅಂತರದಲ್ಲಿ, ಅಭಿನವ್ ಮನೋಹರ್, ಶತಕವೀರ ಮಯಾಂಕ್ ಅಗರ್ವಾಲ್ ಮತ್ತು ದಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೇಗಿ ವೈಶಾಕ್ ವಿಜಯ್ಕುಮಾರ್ (0) ಔಟಾಗಿದ್ದು, ರಾಜ್ಯಕ್ಕೆ ಅಂತಿಮ ದಿನ ಮುನ್ನಡೆಯನ್ನು ಇನ್ನಷ್ಟು ಹಿಗ್ಗಿಸಲು ತುಸು ಹೊಡೆತ ನೀಡಿದಂತಿದೆ. ಶ್ರೇಯಸ್ ಗೋಪಾಲ್ (1*) ಏಕಾಂಗಿಯಾಗಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮಯಾಂಕ್ಗೆ ಮನೀಷ್ ಸಾಥ್
ಕ್ರಮವಾಗಿ 4 ಮತ್ತು 11 ರನ್ಗಳಿಂದ ದಿನದಾಟ ಆರಂಭಿಸಿದ ಸುಜಯ್ ಸಾತೇರಿ (10) ಮತ್ತು ನಿಕಿನ್ ಜೋಸ್ (16) ರಾಜ್ಯ ತಂಡದ ಮೊತ್ತ 41 ರನ್ ಆಗುವಷ್ಟರಲ್ಲಿ ಯುವ ವೇಗಿ ಶಕೀಬ್ ಹುಸೇನ್ಗೆ ವಿಕೆಟ್ ಒಪ್ಪಿಸಿದರು. ಆಗ ಜತೆಗೂಡಿದ ಮಯಾಂಕ್ ಅಗರ್ವಾಲ್ ಮತ್ತು ಆರ್. ಸ್ಮರಣ್ (37) 3ನೇ ವಿಕೆಟ್ಗೆ 80 ರನ್ ಸೇರಿಸಿ ಆಧರಿಸಿದರು. 13 ವರ್ಷದ ವೈಭವ್ ಸೂರ್ಯವಂಶಿ, ಸ್ಮರಣ್ರನ್ನು ಔಟ್ ಮಾಡಿ ಈ ಜತೆಯಾಟವನ್ನು ಬೇರ್ಪಡಿಸಿದಾಗ ಮಯಾಂಕ್ ಜತೆಗೂಡಿದ ಮತ್ತೋರ್ವ ಅನುಭವಿ ಬ್ಯಾಟರ್ ಮನೀಷ್ ಪಾಂಡೆ (56), 4ನೇ ವಿಕೆಟ್ಗೆ ಬಿರುಸಿನ ಆಟವಾಡಿ ಭರ್ತಿ 100 ರನ್ ಸೇರಿಸಿದರು. ಮನೀಷ್ ಔಟಾದ ಬಳಿಕ, ಪದಾರ್ಪಣೆಯ ಪಂದ್ಯದಲ್ಲಿ ಮೊದಲ ಬಾರಿ ಬ್ಯಾಟಿಂಗ್ಗೆ ಇಳಿದ ಅಭಿನವ್ ಮನೋಹರ್ (37) ಕೂಡ ಬಿರುಸಿನ ಆಟವಾಡಿದರು. ಇವರಿಬ್ಬರು 5ನೇ ವಿಕೆಟ್ಗೆ 47 ಎಸೆತಗಳಲ್ಲೇ 65 ರನ್ ಕಸಿದರು. ಈ ನಡುವೆ ಮಯಾಂಕ್ ಶತಕ ಪೂರ್ಣಗೊಳಿಸಿದರು. ಮಯಾಂಕ್ ಅಗರ್ವಾಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಿಡಿಸಿದ 18ನೇ ಶತಕ ಇದಾಗಿದೆ. ದಿನದ ಕೊನೇ ಓವರ್ನಲ್ಲಿ ಲೆಗ್ ಸ್ಪಿನ್ನರ್ ಹಿಮಾಂಶು ಸಿಂಗ್ ರಾಜ್ಯಕ್ಕೆ ತ್ರಿವಳಿ ಆಘಾತ ನೀಡಿದರು.
ಪೂರ್ಣ ಅಂಕ ಗಳಿಸುವ ಅವಕಾಶ
ಮತ್ತೆ ಮಳೆ ಅಡಚಣೆ ಎದುರಾಗದೆ ಅಂತಿಮ ದಿನ ಪೂರ್ಣ ಆಟ ನಡೆದರೆ ಕರ್ನಾಟಕ ತಂಡ ಇನಿಂಗ್ಸ್ ಗೆಲುವಿನೊಂದಿಗೆ ಸಂಪೂರ್ಣ 7 ಅಂಕ ಕಲೆಹಾಕುವ ಅವಕಾಶ ಹೊಂದಿದೆ. ಸದ್ಯ 144 ರನ್ ಮುನ್ನಡೆಯಲ್ಲಿದ್ದು, ಮಂಗಳವಾರ ಮತ್ತೆ 100-150 ರನ್ ಸೇರಿಸಿ 200-250 ಪ್ಲಸ್ ಮುನ್ನಡೆ ಸಾಧಿಸಿದರೆ, ಬಿಹಾರ ತಂಡವನ್ನು 2ನೇ ಇನಿಂಗ್ಸ್ನಲ್ಲಿ ಬೇಗನೆ ಕಟ್ಟಿಹಾಕುವ ಮೂಲಕ ಇನಿಂಗ್ಸ್ ಗೆಲುವು ದಾಖಲಿಸಬಹುದಾಗಿದೆ.
ಮಧ್ಯಾಹ್ನ ನಂತರ ಆಟ ಆರಂಭ
ಭಾನುವಾರ ದಿನವಿಡೀ ಮತ್ತು ರಾತ್ರಿಯೂ ಮಳೆ ಸುರಿಯದ ನಡುವೆಯೂ ಮೈದಾನ ಸೋಮವಾರ ಬೆಳಗ್ಗೆಯೂ ಒದ್ದೆಯಾಗಿಯೇ ಇತ್ತು. ಪ್ರಮುಖವಾಗಿ ಪಿಚ್ ಸಮೀಪದ ಶಾರ್ಟ್ ಕವರ್ ಪ್ರದೇಶ ಹೆಚ್ಚು ಒದ್ದೆಯಾಗಿತ್ತು. ಇದರಿಂದಾಗಿ 3ನೇ ದಿನ ಆಟ ಆರಂಭ ವಿಳಂಬಗೊಂಡಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಕೊನೆಗೂ ಆಟ ಆರಂಭಗೊಂಡಿತು. ಸಂಜೆ ಮಂದಬೆಳಕಿನಿಂದ ಆಟ ಬೇಗನೆ ನಿಂತ ಕಾರಣ, 3ನೇ ದಿನದಾಟದಲ್ಲಿ ಗರಿಷ್ಠ 70 ಓವರ್ ಆಡುವ ಯೋಜನೆ ಇದ್ದರೂ, 48 ಓವರ್ ಆಟವಷ್ಟೇ ನಡೆಯಿತು.
ಅಂಪೈರ್ಸ್ ಜತೆ ಮಯಾಂಕ್ ವಾಗ್ವಾದ
ಮೈದಾನದ ಕಳಪೆ ನಿರ್ವಹಣೆಯ ಬಗ್ಗೆ ರಾಜ್ಯ ತಂಡದ ನಾಯಕ ಮಯಾಂಕ್ ಅಗರ್ವಾಲ್, ಅಂಪೈರ್ಗಳು ಮತ್ತು ಮ್ಯಾಚ್ ರೆಫ್ರಿ ಜತೆಗೆ ವಾಗ್ವಾದವನ್ನೂ ನಡೆಸಿದರು. ಬೆಳಗ್ಗೆ ಅಂಪೈರ್ಗಳು ಪದೇಪದೆ ಮೈದಾನ ಪರಿಶೀಲಿಸುತ್ತಿದ್ದರೂ, ಆಟ ಆರಂಭಿಸುವ ಆಸಕ್ತಿ ತೋರಿರಲಿಲ್ಲ. ಹೀಗಾಗಿ ಮಯಾಂಕ್ ಸಿಟ್ಟಾಗಿದ್ದರು.
ಬಿಹಾರ: 143, ಕರ್ನಾಟಕ: 51 ಓವರ್ಗಳಲ್ಲಿ 7 ವಿಕೆಟ್ಗೆ 287 (ನಿಕಿನ್ ಜೋಸ್ 16, ಸುಜಯ್ 10, ಮಯಾಂಕ್ ಅಗರ್ವಾಲ್ 105, ಸ್ಮರಣ್ 37, ಮನೀಷ್ ಪಾಂಡೆ 56, ಅಭಿನವ್ ಮನೋಹರ್ 37, ಶ್ರೇಯಸ್ 1*, ವೈಶಾಕ್ 0, ಹಿಮಾಂಶು 51ಕ್ಕೆ 4, ಶಕಿಬ್ 86ಕ್ಕೆ 2, ಸೂರ್ಯವಂಶಿ 21ಕ್ಕೆ 1).