ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಜತೆಗೆ 2017ರ ಐಪಿಎಲ್ ಸಮಯದಲ್ಲಿ ಉಂಟಾದ ಮನಸ್ತಾಪ ಮತ್ತು ಆ ನಂತರದಲ್ಲಿ ತಾವಿಬ್ಬರು ಪರಸ್ಪರ ಮಾತನ್ನೇ ಆಡದಿರುವ ಬಗ್ಗೆ ಆಸ್ಟ್ರೆಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ತನ್ನ ನೂತನ ಪುಸ್ತಕ "ದಿ ಶೋಮ್ಯಾನ್'ನಲ್ಲಿ ಬಹಿರಂಗಪಡಿಸಿದ್ದಾರೆ.
2014ರಲ್ಲಿ ಮ್ಯಾಕ್ಸ್ವೆಲ್, ಸೆಹ್ವಾಗ್ ನಾಯಕತ್ವದಡಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ನಂತರ 2017ರಲ್ಲಿ ಸೆಹ್ವಾಗ್ ಪಂಜಾಬ್ ತಂಡದ ಮೆಂಟರ್ ಆದಾಗ ಮ್ಯಾಕ್ಸ್ವೆಲ್ರನ್ನು ನಾಯಕರನ್ನಾಗಿ ನೇಮಿಸಿದ್ದರು. ಆದರೆ ಆಡುವ 11ರ ಬಳಗದ ಆಯ್ಕೆಯನ್ನು ಸೆಹ್ವಾಗ್ ಒಬ್ಬರೇ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದರು. ನಂತರ ತಂಡ ಸತತ ಸೋಲಿನೊಂದಿಗೆ ವೈಫಲ್ಯ ಕಂಡಾಗ ಸೆಹ್ವಾಗ್, ನನ್ನನ್ನು ದೂರಿದ್ದರು. ಇದಕ್ಕೆ ಬೇಸರಿಸಿ, ನೀವು ನನ್ನಲ್ಲಿರುವ ಅಭಿಮಾನಿಯನ್ನು ಕಳೆದುಕೊಂಡಿರಿ ಎಂಬ ಸಂದೇಶ ಕಳುಹಿಸಿದ್ದರೆ, "ನಿನ್ನಂಥ ಅಭಿಮಾನಿ ನನಗೆ ಬೇಕಿಲ್ಲ' ಎಂದು ಅವಮಾನಿಸಿದ್ದರು. ನಂತರದಲ್ಲಿ ನಾವಿಬ್ಬರು ಒಮ್ಮೆಯೂ ಮಾತನಾಡಿಲ್ಲ ಎಂದು ಮ್ಯಾಕ್ಸ್ವೆಲ್ ಪುಸ್ತಕದಲ್ಲಿ ವಿವರಿಸಿದ್ದಾರೆ.
2021ರಲ್ಲಿ ಆರ್ಸಿಬಿ ತಂಡ ಸೇರ್ಪಡೆಗೊಂಡ ಬಳಿಕ ನನಗೆ ಐಪಿಎಲ್ನಲ್ಲಿ ಹೊಸ ಜೀವನ ದೊರೆಯಿತು. ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್ ಜತೆಗೆ ಮುಂಬೈ ತಂಡದಲ್ಲಿ ಆಡುವ ಮೂಲಕ ವೃತ್ತೀಜಿವನ ಆರಂಭಿಸಿದ್ದ ನನಗೆ ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ರಂಥ ಶ್ರೇಷ್ಠ ಬ್ಯಾಟರ್ಗಳ ಜತೆಗೆ ಆಡುವ ಅವಕಾಶ ಲಭಿಸಿತು ಎಂದಿದ್ದಾರೆ.