ಕ್ರೀಡೆ

ರಾಜಸ್ಥಾನ ರಾಯಲ್ಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಬಾಂಬ್​! ಲಖನೌ ವಿರುದ್ಧ 2 ರನ್​ ಸೋಲಿನ ನಂತರ ಆರೋಪ!

ಜೈಪುರ: ಐಪಿಎಲ್​ನಲ್ಲಿ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಸೋತು ಪರದಾಡುತ್ತಿರುವ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ರಾಜಸ್ಥಾನ ರಾಯಲ್ಸ್​ ತಂಡ ಮ್ಯಾಚ್​ ಫಿಕ್ಸಿಂಗ್​ ಮಾಡಿ ಪಂದ್ಯಗಳನ್ನು ಸೋಲುತ್ತಿದೆ ಎಂದು ರಾಜಸ್ಥಾನ ಕ್ರಿಕೆಟ್​ ಸಂಸ್ಥೆಯ (ಆರ್​ಸಿಎ) ಆಡ್​ಹಾಕ್​ ಸಮಿತಿಯ ಸಂಚಾಲಕ ಜೈದೀಪ್​ ಬಿಹಾನಿ ಆರೋಪಿಸಿದ್ದಾರೆ. ಲಖನೌ ವಿರುದ್ಧದ ಪಂದ್ಯದಲ್ಲಿ ಆರ್​ಆರ್​ ತಂಡ ಕೊನೇ ಓವರ್​ನಲ್ಲಿ 9 ರನ್​ ಬೆನ್ನಟ್ಟಲಾಗದೆ 2 ರನ್​ಗಳಿಂದ ಸೋಲು ಅನುಭವಿಸಿರುವುದನ್ನು ಉಲ್ಲೇಖಿಸಿ ಅವರು ಈ ಆರೋಪ ಮಾಡಿದ್ದಾರೆ.

ರಾಜಸ್ಥಾನದ ಬಿಜೆಪಿ ಶಾಸಕರೂ ಆಗಿರುವ ಜೈದೀಪ್​, "ಲಖನೌ ವಿರುದ್ಧದ ಪಂದ್ಯ ಫಿಕ್ಸ್​ ಆಗಿತ್ತು ಎಂದು ಮಗು ಕೂಡ ಹೇಳಬಲ್ಲುದು. ತವರು ಮೈದಾನದಲ್ಲಿ ಕೊನೇ ಓವರ್​ನಲ್ಲಿ ಅಷ್ಟು ಕಡಿಮೆ ರನ್​ಗಳನ್ನು ಗಳಿಸಲಾಗದೆ ಅವರು ಹೇಗೆ ಸೋಲುತ್ತಾರೆ' ಎಂದು ಹೇಳಿದ್ದಾರೆ. ಅಲ್ಲದೆ ಆರ್​ಆರ್​ ತಂಡದ ಮ್ಯಾನೇಜ್​ಮೆಂಟ್​ನಲ್ಲಿ ಆರ್​ಸಿಎಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ದೂರಿದ್ದಾರೆ.

ಆರ್​ಸಿಎ ಆಡ್​ಹಾಕ್​ ಸಮಿತಿ ಸದಸ್ಯರಿಗೆ ಐಪಿಎಲ್​ ಪಂದ್ಯಗಳ ವೇಳೆ ಸ್ಟೇಡಿಯಂ ಪ್ರವೇಶಕ್ಕೆ ಮಾನ್ಯತೆ ಕಾರ್ಡ್​ಗಳನ್ನು ನೀಡದಿರುವುದು ಜೈದೀಪ್​ ಸಿಟ್ಟಿಗೆ ಪ್ರಮುಖ ಕಾರಣವಾಗಿದೆ. ಜೈಪುರದ ಸವಾಯಿ ಮಾನ್​ ಸಿಂಗ್​ ಸ್ಟೇಡಿಯಂನ ಒಡೆತನ, ಐಪಿಎಲ್​ ವೇಳೆ ಆರ್​ಸಿಎಗೆ ಬದಲಾಗಿ ರಾಜ್ಯ ಸ್ಪೋರ್ಟ್ಸ್​ ಕೌನ್ಸಿಲ್​ಗೆ ಒಳಪಟ್ಟಿರುತ್ತದೆ.

ಫ್ರಾಂಚೈಸಿಯಿಂದ ಸಿಎಂಗೆ ದೂರು

ಮ್ಯಾಚ್​ ಫಿಕ್ಸಿಂಗ್​ ಆರೋಪ ಮಾಡಿರುವ ಜೈದೀಪ್​ ಬಿಹಾನಿ ವಿರುದ್ಧ ರಾಜಸ್ಥಾನ ಫ್ರಾಂಚೈಸಿ ರಾಜಸ್ಥಾನದ ಮುಖ್ಯಮಂತ್ರಿ ಭಜನ್​ ಲಾಲ್​ ಶರ್ಮಗೆ ದೂರು ಸಲ್ಲಿಸಿದೆ. ಜತೆಗೆ ಇದೊಂದು ಸುಳ್ಳು, ನಿರಾಧಾರ ಮತ್ತು ಸಾಕ್ಷ$್ಯ ರಹಿತವಾದ ಆರೋಪವಾಗಿದೆ ಎಂದು ತಿಳಿಸಿದೆ. ರಾಜಸ್ಥಾನದ ಕ್ರೀಡಾ ಸಚಿವ ಮತ್ತು ಕ್ರೀಡಾ ಕಾರ್ಯದರ್ಶಿಗೂ ದೂರು ನೀಡಲಾಗಿದ್ದು, ಜೈದೀಪ್​ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ.

*ನಾವು ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತೇವೆ. ಇಂಥ ಸಾರ್ವಜನಿಕ ಹೇಳಿಕೆಗಳಿಂದ ರಾಜಸ್ಥಾನ ರಾಯಲ್ಸ್​ ಮಾತ್ರವಲ್ಲದೆ ಬಿಸಿಸಿಐನ ವರ್ಚಸ್ಸಿಗೂ ಗಂಭೀರ ಹೊಡೆತ ಬೀಳುತ್ತದೆ. ಕ್ರಿಕೆಟ್​ ವಿಶ್ವಾಸಾರ್ಹತೆಯನ್ನೂ ಹಾಳು ಮಾಡುತ್ತದೆ.

| ಅಧಿಕಾರಿ, ರಾಜಸ್ಥಾನ ರಾಯಲ್ಸ್​