ಕ್ರೀಡೆ

ಭಾರತ ಒಲಿಂಪಿಕ್ಸ್ ತಂಡದ ಚೀಫ್​ ಡಿ ಮಿಷನ್​ ಹುದ್ದೆ ತೊರೆದ ಮೇರಿ ಕೋಮ್; ಕಾರಣ ಹೀಗಿದೆ...

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್​ ಬಾಕ್ಸರ್​ ಎಂಸಿ ಮೇರಿ ಕೋಮ್​ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತ ತಂಡದ ಚೀಫ್ ಡಿ ಮಿಷನ್​ ಹುದ್ದೆಯನ್ನು ತ್ಯಜಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಅನಿವಾರ್ಯವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ 41 ವರ್ಷದ ಮೇರಿ ಕೋಮ್​ ತಿಳಿಸಿದ್ದಾರೆ.

2012ರ ಲಂಡನ್​ ಒಲಿಂಪಿಕ್ಸ್​ ಕಂಚು ವಿಜೇತೆ ಮೇರಿ ಕೋಮ್​ ತನ್ನನ್ನು ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಪತ್ರ ಮುಖೇನ ಕೇಳಿಕೊಂಡಿದ್ದಾರೆ ಎಂದು ಭಾರತೀಯ ಒಲಿಂಪಿಕ್​ ಸಮಿತಿಯ (ಐಒಎ) ಅಧ್ಯಕ್ಷೆ ಪಿಟಿ ಉಷಾ ತಿಳಿಸಿದ್ದಾರೆ.

"ನಾನು ಸಾಧ್ಯವಿರುವ ಎಲ್ಲ ವಿಧದಲ್ಲೂ ದೇಶಸೇವೆಗೆ ಸಿದ್ಧಳಿರುತ್ತೇನೆ. ಈ ಹುದ್ದೆಗೂ ನಾನು ಮಾನಸಿಕವಾಗಿ ಸಜ್ಜಾಗಿದ್ದೆ. ಆದರೆ ಈಗ ಈ ಪ್ರತಿಷ್ಠಿತ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನನಗೆ ಸಾಧ್ಯವಾಗದಿರುವ ಬಗ್ಗೆ ವಿಷಾದವಿದೆ. ವೈಯಕ್ತಿಕ ಕಾರಣಗಳಿಂದಾಗಿ ನಾನು ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಬೇರೆ ಆಯ್ಕೆ ಇಲ್ಲದ ಕಾರಣ ಈ ನಿರ್ಧಾರ ಕೈಗೊಂಡಿರುವೆ. ಇನ್ನೀಗ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ದೇಶದ ಕ್ರೀಡಾಪಟುಗಳನ್ನು ಹುರಿದುಂಬಿಸಲಿದ್ದೇನೆ' ಎಂದು ಮೇರಿ ಕೋಮ್​ ಪತ್ರದಲ್ಲಿ ವಿವರಿಸಿದ್ದಾರೆ. ಕಳೆದ ಮಾರ್ಚ್​ 21ರಂದೇ ಅವರನ್ನು ಐಒಎ ನೇಮಕ ಮಾಡಿತ್ತು.

ಮೇರಿ ಕೋಮ್​ ನಿರ್ಧಾರ ಮತ್ತು ಖಾಸಗಿತನವನ್ನು ನಾವು ಗೌರವಿಸುತ್ತೇವೆ. ಶೀಘ್ರದಲ್ಲೇ ಈ ಹುದ್ದೆಗೆ ಬದಲಿ ವ್ಯಕ್ತಿಯನ್ನು ನೇಮಿಸಲಿದ್ದೇವೆ ಎಂದು ಪಿಟಿ ಉಷಾ ತಿಳಿಸಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​ ಜುಲೈ 26ರಿಂದ ಆಗಸ್ಟ್​ 11ರವರೆಗೆ ನಡೆಯಲಿದೆ. ವಿಂಟರ್​ ಒಲಿಂಪಿಯನ್​ ಮತ್ತು ಲ್ಯುಗರ್​ ಶಿವ ಕೇಶವನ್​ ಒಲಿಂಪಿಕ್ಸ್​ಗೆ ಭಾರತ ತಂಡದ ಉಪ ಚೀಫ್​ ಡಿ ಮಿಷನ್​ ಆಗಿದ್ದಾರೆ.

ಮಹಿಳಾ ಧ್ವಜಧಾರಿ ಆಯ್ಕೆ ವಿಳಂಬ

ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭಕ್ಕೆ ಈಗಾಗಲೆ ಅನುಭವಿ ಟೇಬಲ್​ ಟೆನಿಸ್​ ಆಟಗಾರ ಶರತ್​ ಕಮಲ್​ ಅವರನ್ನು ಧ್ವಜಧಾರಿಯಾಗಿ ಆರಿಸಲಾಗಿದೆ. ಭಾರತ ಧ್ವಜಧಾರಿಯಾಗಿ ಇನ್ನೋರ್ವ ಮಹಿಳಾ ಕ್ರೀಡಾಪಟುವನ್ನು ಕೂಡ ಆಯ್ಕೆ ಮಾಡಬೇಕಾಗಿದೆ. ಒಲಿಂಪಿಕ್ಸ್​ ಅರ್ಹತಾ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ಮಹಿಳಾ ಕ್ರೀಡಾಪಟು ಆಯ್ಕೆ ವಿಳಂಬಗೊಳಿಸಲಾಗಿದೆ. ಸದ್ಯಕ್ಕೆ ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತದ 66 ಕ್ರೀಡಾಪಟುಗಳು ಅರ್ಹತೆ ಸಂಪಾದಿಸಿದ್ದಾರೆ. ಈ ಪೈಕಿ 43 ಪುರುಷ ಮತ್ತು 23 ಮಹಿಳಾ ಕ್ರೀಡಾಪಟುಗಳಾಗಿದ್ದಾರೆ.