ಕ್ರೀಡೆ

ಮರಿಯಪ್ಪನ್ ರಜತ ನೆಗೆತ, ಪ್ಯಾರಾಲಿಂಪಿಕ್ಸ್‌ನಲ್ಲಿ 10ಕ್ಕೇರಿದ ಭಾರತದ ಪದಕ ಬೇಟೆ

ಟೋಕಿಯೊ: ಭಾರತದ ಕ್ರೀಡಾಪಟುಗಳ ಪದಕ ಬೇಟೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಕ್ರೀಡಾ ಸ್ಪರ್ಧೆಯ 7ನೇ ದಿನವೂ ಮುಂದುವರಿದಿದೆ. ಮಂಗಳವಾರ ಭಾರತ 1 ಬೆಳ್ಳಿ ಮತ್ತು 2 ಕಂಚಿನ ಪದಕ ಒಲಿಸಿಕೊಂಡಿತು. ಇದರಿಂದ ಕೂಟದಲ್ಲಿ ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆ ಎರಡಂಕಿಗೆ (2 ಚಿನ್ನ, 5 ಬೆಳ್ಳಿ, 3 ಕಂಚು, ಒಟ್ಟು:10) ಏರಿದೆ. ಇದು ಕೂಟದ ಇತಿಹಾಸದಲ್ಲಿ ಭಾರತದ ಸಾರ್ವಕಾಲಿಕ ಗರಿಷ್ಠ ಪದಕ ಸಾಧನೆಯಾಗಿದೆ.

ಹೈಜಂಪ್ ಮರಿಯಪ್ಪನ್ ತಂಗವೇಲು ಸತತ 2ನೇ ಸ್ವರ್ಣ ಪದಕ ಗೆಲುವಿನಿಂದ ವಂಚಿತರಾದರೂ, ರಜತ ಪದಕ ಗೆದ್ದ ಸಾಧನೆ ಮಾಡಿದರು. ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಶರದ್ ಕುಮಾರ್ ಕಂಚಿನ ಪದಕ ಜಯಿಸಿದರು. ಶೂಟಿಂಗ್‌ನಲ್ಲಿ ಸಿಂಘರಾಜ್ ಅದಾನ ಕಂಚು ಜಯಿಸುವ ಮೂಲಕ ಭಾರತಕ್ಕೆ ದಿನದ ಮೊದಲ ಪದಕ ಗೆದ್ದುಕೊಟ್ಟಿದ್ದರು. ಉಳಿದಂತೆ ಮಂಗಳವಾರ ಶೂಟಿಂಗ್‌ನಲ್ಲಿ ಭಾರತದ ಮತ್ತಿಬ್ಬರು ಸ್ಪರ್ಧಿಗಳು ಪದಕ ವಂಚಿತರಾದರೆ, ಆರ್ಚರಿ ಮತ್ತು ಟೇಬಲ್ ಟೆನಿಸ್‌ನಲ್ಲಿ ಭಾರತದ ಕ್ರೀಡಾಪಟುಗಳಿಗೆ ನಿರಾಸೆ ಎದುರಾಯಿತು.

ಒಂದು ಕಾಲಿನ ಅಂಗವೈಕಲ್ಯ ಹೊಂದಿರುವವರ ಟಿ63 ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತಮಿಳುನಾಡಿನ ಮರಿಯಪ್ಪನ್ ತಂಗವೇಲು 1.86 ಮೀಟರ್ ಎತ್ತರ ಹಾರಿ ಬೆಳ್ಳಿ ಪದಕ ಜಯಿಸಿದರೆ, ಶರದ್ ಕುಮಾರ್ 1.83 ಮೀಟರ್ ಎತ್ತರ ಹಾರಿ ಕಂಚು ಗಳಿಸಿದರು. ಅಮೆರಿಕದ ಸ್ಯಾಮ್ ಗ್ರೇವ್ 1.88 ಮೀಟರ್ ಎತ್ತರ ಹಾರಿ ಚಿನ್ನದ ಪದಕ ಜಯಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತೋರ್ವ ಭಾರತೀಯ ವರುಣ್ ಭಾಟಿ 1.77 ಮೀಟರ್ ಎತ್ತರ ಹಾರಲಷ್ಟೇ ಶಕ್ತರಾಗಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟರು. ವರುಣ್ ಭಾಟಿ 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದರು. ಭಾರತದ ಮೂವರೂ ಹೈಜಂಪ್‌ಪಟುಗಳಿಗೆ ಕನ್ನಡಿಗ ಸತ್ಯನಾರಾಯಣ ಕೋಚ್ ಆಗಿದ್ದಾರೆ.

ಮಳೆಯಿಂದಾಗಿ ಮರಿಯಪ್ಪನ್‌ಗೆ ತಪ್ಪಿದ ಚಿನ್ನ

ರಿಯೋ ಪ್ಯಾರಾಲಿಂಪಿಕ್ಸ್ ಸ್ವರ್ಣ ವಿಜೇತ ಹಾಗೂ ಖೇಲ್‌ರತ್ನ ಪ್ರಶಸ್ತಿ ಪುರಸ್ಕೃತ ಮರಿಯಪ್ಪನ್ ತಂಗವೇಲು 5ನೇ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಬಸ್ ಚಕ್ರದಡಿ ಸಿಲುಕಿ ಎಡಗಾಲು ಪಾದ ಕಳೆದುಕೊಂಡಿದ್ದರು. ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಸ್ಪರ್ಧೆಯ ವೇಳೆ ಬಿದ್ದ ತುಂತುರು ಮಳೆಗೆ 26 ವರ್ಷದ ಮರಿಯಪ್ಪನ್ ಅವರ ಕಾಲಿನ ಸಾಕ್ಸ್ ಒದ್ದೆಯಾಯಿತು. ಇದರಿಂದಾಗಿ 1.88 ಮೀಟರ್ ಎತ್ತರ ಹಾರುವ ಮೂರೂ ಯತ್ನದಲ್ಲಿ ಅವರು ವಿಲರಾಗಿ ಸ್ವರ್ಣ ಪದಕ ವಂಚಿತರಾದರು. ಗ್ರೀವ್ 3ನೇ ಯತ್ನದಲ್ಲಿ 1.88 ಮೀಟರ್ ಎತ್ತರ ಹಾರುವಲ್ಲಿ ಸಲರಾಗಿದ್ದರಿಂದ ಚಿನ್ನಕ್ಕೆ ಕೊರಳೊಡ್ಡಿದರು. ಕೂಟದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಬೇಕಾಗಿದ್ದ ಮರಿಯಪ್ಪನ್, ವಿಮಾನ ಪ್ರಯಾಣದ ವೇಳೆ ಕರೊನಾ ಸೋಂಕಿತರ ಸಂಪರ್ಕ ಹೊಂದಿದ್ದ ಕಾರಣ, ಕ್ವಾರಂಟೈನ್‌ಗೆ ಒಳಗಾಗಿ ಅವಕಾಶ ತಪ್ಪಿಸಿಕೊಂಡಿದ್ದರು.

ಮರಿಯಪ್ಪನ್ ತಂಗವೇಲು ಪ್ಯಾರಾಲಿಂಪಿಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕ ಜಯಿಸಿದ 3ನೇ ಭಾರತೀಯರೆನಿಸಿದರು. ದೇವೇಂದ್ರ ಜಜಾರಿಯಾ (2 ಚಿನ್ನ, 1 ಬೆಳ್ಳಿ) ಮತ್ತು ಜೋಗಿಂದರ್ ಸಿಂಗ್ ಬೇಡಿ (1 ಬೆಳ್ಳಿ, 2 ಕಂಚು) ತಲಾ 3 ಪದಕ ಗೆದ್ದಿರುವ ಸಾಧಕರು.

ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

ಪ್ಯಾರಾಲಿಂಪಿಕ್ಸ್‌ನಲ್ಲಿ ಮಂಗಳವಾರ ಪದಕ ಜಯಿಸಿದ ಮರಿಯಪ್ಪನ್ ತಂಗವೇಲು, ಶರದ್ ಕುಮಾರ್ ಮತ್ತು ಸಿಂಘರಾಜ್ ಅದಾನಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಪ್ರಧಾನಿ ದೂರವಾಣಿ ಕರೆ ಮಾಡಿಯೂ ಮೂವರಿಗೆ ಅಭಿನಂದನೆ ತಿಳಿಸಿದರು.