ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಪದಕ ಸಾಧನೆಯ ಬಳಿಕ ತನ್ನ ಚಿತ್ರಗಳನ್ನು ಬಳಸಿ, ತನಗೆ ಅಭಿನಂದನೆ ಸಲ್ಲಿಸುವ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನಧಿಕೃತವಾಗಿ ಪ್ರಕಟಿರುವ 12 ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಶೂಟರ್ ಮನು ಭಾಕರ್ ಮುಂದಾಗಿದ್ದಾರೆ.
ಈ 12 ಬ್ರ್ಯಾಂಡ್ಗಳು ತನಗೆ ಪ್ರಾಯೋಜಕತ್ವ ನೀಡಿರದಿದ್ದರೂ ಮತ್ತು ತನ್ನನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳದಿದ್ದರೂ, ಇದೀಗ ತನ್ನ ಯಶಸ್ಸಿನಲ್ಲಿ ಪಾಲು ಪಡೆಯಲು ಮುಂದಾಗುವ ಮೂಲಕ ಉಚಿತ ಮಾರ್ಕೆಟಿಂಗ್ ಮಾಡಿವೆ ಎಂದು ಆರೋಪಿಸಿರುವ ಮನು ಭಾಕರ್ ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ತಂಡ, ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದೆ.
ಮನು ಸದ್ಯ "ಪಾಮ್ಯಾಕ್ಸ್ ಆಕ್ಟಿವ್ವೇರ್'ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ. ಆದರೆ ಇತರ ಕೆಲ ಬ್ರ್ಯಾಂಡ್ಗಳು ಮನು ಚಿತ್ರ ಮತ್ತು ವಿಡಿಯೋ ಜತೆಗೆ ತನ್ನ ಬ್ರ್ಯಾಂಡ್ ಲಾಂಛನವನ್ನೂ ಬಳಸಿ ಅಭಿನಂದನೆಯ ಪೋಸ್ಟ್ ಹಾಕಿವೆ. ಇದು ಭಾರತದಲ್ಲಿ ಕಾನೂನುಬಾಹಿರ ಎನಿಸಿದೆ. ವ್ಯಕ್ತಿಯೊಬ್ಬರಿಗೆ ಪ್ರಾಯೋಜಕತ್ವ ಒಪ್ಪಂದ ನೀಡದೆ ಅವರ ಚಿತ್ರಗಳ ಹಕ್ಕು ಪಡೆದುಕೊಳ್ಳುವಂತಿಲ್ಲ.