Manu Bhaker : ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರನ್ನು ಪರಿಗಣಿಸಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. 12 ಸದಸ್ಯರ ಆಯ್ಕೆ ಸಮಿತಿಯು ಪ್ರಶಸ್ತಿಗೆ ಶಿಫಾರಸು ಮಾಡಿದ ಪಟ್ಟಿಯಲ್ಲಿ ಮನು ಭಾಕರ್ ಹೆಸರಿಲ್ಲ ಎಂದು ವರದಿಯಾಗಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ನೇತೃತ್ವದ ಆಯ್ಕೆ ಸಮಿತಿಯು ಪಟ್ಟಿಯನ್ನು ರೆಡಿ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ ಹೈಜಂಪರ್ ಪ್ರವೀಣ್ ಕುಮಾರ್ ಹೆಸರೂ ಕೂಡ ಇವೆ. ಅಂದಹಾಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪ್ರವೀಣ್ ಕುಮಾರ್ ಎತ್ತರ ಜಿಗಿತದ ಸ್ಪರ್ಧಿ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಗೆದ್ದಿರುವ ಮನು ಭಾಕರ್ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಕ್ರೀಡಾ ಸಚಿವಾಲಯ ಹೇಳಿದೆ. ಆದರೆ, ಅರ್ಜಿಯನ್ನು ಕಳುಹಿಸಲಾಗಿದೆ ಎಂದು ಮನು ಕುಟುಂಬ ಮತ್ತು ಆಪ್ತ ಮೂಲಗಳು ತಿಳಿಸಿವೆ. ಶಿಫಾರಸಿನ ಕುರಿತು ಕೇಂದ್ರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಮನು ಭಾಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸದಿದ್ದರೂ ಡಬಲ್ ಮೆಡಲಿಸ್ಟ್ ಅನ್ನು ಪರಿಗಣಿಸಬೇಕಿತ್ತು ಎಂಬ ಅಭಿಪ್ರಾಯಗಳೂ ಇವೆ. ಕ್ರೀಡೆಯಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಮನು ಭಾಕರ್ 2020ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು.
ಅಂದಹಾಗೆ ಮನು ಭಾಕರ್ ಕಳೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದರು. 10 ಮೀಟರ್ ಮಹಿಳೆಯರ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಅವರು ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಒಲಿಂಪಿಕ್ ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್)