ಕ್ರೀಡೆ

ರಣಜಿ ಟ್ರೋಫಿಯಲ್ಲಿ ಕರ್ನಾಟಕಕ್ಕೆ ರೋಚಕ ಜಯ; ರೈಲ್ವೇಸ್​ ಎದುರು ಮನೀಷ್​ ಪಾಂಡೆ ಗೆಲುವಿನಾಟ

ಸೂರತ್​: ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ (67*ರನ್​, 121 ಎಸೆತ, 6 ಬೌಂಡರಿ, 1 ಸಿಕ್ಸರ್​) ಜವಾಬ್ದಾರಿಯುತ ಬ್ಯಾಟಿಂಗ್​ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ 5ನೇ ಲೀಗ್​ ಪಂದ್ಯದಲ್ಲಿ ಆತಿಥೇಯ ರೈಲ್ವೇಸ್​ ಎದುರು 1 ವಿಕೆಟ್​ನಿಂದ ರೋಚಕ ಗೆಲುವು ಸಾಧಿಸಿದೆ.

ಲಾಲ್​ಬಾಯಿ ಕಂಟ್ರಾಕ್ಟರ್​ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಕಾದಾಟದಲ್ಲಿ 8 ವಿಕೆಟ್​ಗೆ 209 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ರೈಲ್ವೇಸ್​, ಮೊಹಮದ್​ ಸೈಫ್​ (82) ದಿಟ್ಟ ಆಟದ ನಡುವೆ ವೇಗಿ ವೈಶಾಕ್​ ವಿಜಯ್​ಕುಮಾರ್​ (67ಕ್ಕೆ 5) ದಾಳಿಗೆ ಕುಸಿದು 244 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ ಲೋ-ಸ್ಕೋರಿಂಗ್​ ಪಂದ್ಯದಲ್ಲಿ 226 ರನ್​ಗಳ ಕಠಿಣ ಸವಾಲನ್ನೇ ಪಡೆದ ಕರ್ನಾಟಕ ತಂಡ ಯುವ ಬ್ಯಾಟರ್​ಗಳ ವೈಲ್ಯದ ನಡುವೆ ಮನೀಷ್​ ಪಾಂಡೆ ಸಾಹಸದಿಂದ 82.4 ಓವರ್​ಗಳಲ್ಲಿ 9 ವಿಕೆಟ್​ಗೆ 229 ರನ್​ ಪೇರಿಸಿ ಇನ್ನೊಂದು ದಿನ ಬಾಕಿ ಇರುವಂತೆಯೇ ಗೆಲುವು ಒಲಿಸಿಕೊಂಡಿತು.

ಮನೀಷ್​ ಏಕಾಂಗಿ ಸಾಹಸ

ಚೇಸಿಂಗ್​ ವೇಳೆ ಆರಂಭಿಕ ಡಿ. ನಿಶ್ಚಲ್​ (1) ವಿಕೆಟ್​ ಬೇಗನೆ ಕಳೆದುಕೊಂಡ ಕರ್ನಾಟಕಕ್ಕೆ ಆರ್​. ಸಮರ್ಥ್​ (35) ಮತ್ತು ಕೆವಿ ಅನೀಶ್​ (34) 2ನೇ ವಿಕೆಟ್​ಗೆ 68 ರನ್​ ಪೇರಿಸಿ ಚೇತರಿಕೆ ನೀಡಿದರು. ನಂತರದಲ್ಲಿ ಎಡಗೈ ಸ್ಪಿನ್ನರ್​ ಆಕಾಶ್​ ಪಾಂಡೆ (94ಕ್ಕೆ 5) ದಾಳಿಗೆ ಕುಸಿದ ರಾಜ್ಯ ತಂಡ 29 ರನ್​ ಅಂತರದಲ್ಲಿ 5 ವಿಕೆಟ್​ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತು. ಹಂಗಾಮಿ ನಾಯಕ ನಿಕಿನ್​ ಜೋಸ್​ 2ನೇ ಇನಿಂಗ್ಸ್​ನಲ್ಲೂ ಖಾತೆ ತೆರೆಯಲು ವಿಫಲರಾದರು. ಆಗ ತಂಡಕ್ಕೆ ಆಸರೆಯಾಗಿ ನಿಂತ ಮನೀಷ್​, ವಿಕೆಟ್​ ಕೀಪರ್​-ಬ್ಯಾಟರ್​ ಶರತ್​ ಶ್ರೀನಿವಾಸ್​ (23) ಜತೆಗೆ 34 ರನ್​ ಸೇರಿಸಿ ಗೆಲುವಿನಾಸೆಗೆ ಮರುಜೀವ ತುಂಬಿದರೆ, ವೈಶಾಕ್​ ವಿಜಯ್​ಕುಮಾರ್​ (38) ಜತೆಗೆ 64 ರನ್​ ಸೇರಿಸಿ ಗೆಲುವಿನ ಸನಿಹ ಕೊಂಡೊಯ್ದರು. ಜಯದಿಂದ 12 ರನ್​ ದೂರವಿದ್ದಾಗ 9ನೇ ವಿಕೆಟ್​ ರೂಪದಲ್ಲಿ ವಿದ್ವತ್​ ಕಾವೇರಪ್ಪ (8) ಔಟಾದರು. ಅಂತಿಮವಾಗಿ ಕೊನೇ ಬ್ಯಾಟರ್​ ವಾಸುಕಿ ಕೌಶಿಕ್​ (1*) ಜತೆಗೂಡಿ ಮನೀಷ್​ ಪಾಂಡೆ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.

ರೈಲ್ವೇಸ್​: 155 ಮತ್ತು 72 ಓವರ್​ಗಳಲ್ಲಿ 244 (ಸೈಫ್​ 82, ವೈಶಾಕ್​ 67ಕ್ಕೆ 5, ವಿದ್ವತ್​ 46ಕ್ಕೆ 2), ಕರ್ನಾಟಕ: 174 ಮತ್ತು 82.4 ಓವರ್​ಗಳಲ್ಲಿ 9 ವಿಕೆಟ್​ಗೆ 229 (ಸಮರ್ಥ್​ 35, ಡಿ. ನಿಶ್ಚಲ್​ 1, ಅನೀಶ್​ 34, ನಿಕಿನ್​ ಜೋಸ್​ 0, ಹಾರ್ದಿಕ್​ 14, ಮನೀಷ್​ ಪಾಂಡೆ 67*, ಕಿಶನ್​ 0, ಶರತ್​ 23, ವೈಶಾಕ್​ 38, ವಿದ್ವತ್​ 8, ಕೌಶಿಕ್​ 1*, ಆಕಾಶ್​ ಪಾಂಡೆ 94ಕ್ಕೆ 5, ಸೈಫ್​ 43ಕ್ಕೆ 2, ಹಿಮಾಂಶು 24ಕ್ಕೆ 2). ಪಂದ್ಯಶ್ರೇಷ್ಠ: ಮನೀಷ್​ ಪಾಂಡೆ.

ರಾಜ್ಯಕ್ಕೆ ಮುಂದಿನ ಪಂದ್ಯ

ಎದುರಾಳಿ: ತಮಿಳುನಾಡು

ಯಾವಾಗ: ಫೆಬ್ರವರಿ 9-12

ಎಲ್ಲಿ: ಚೆನ್ನೈ

ರಾಜ್ಯಕ್ಕೆ ಹೆಚ್ಚಿನ ನಾಕೌಟ್​ ಆಸೆ

ಆಡಿದ 5ನೇ ಪಂದ್ಯದಲ್ಲಿ ಕಂಡ 3ನೇ ಜಯದೊಂದಿಗೆ ಕರ್ನಾಟಕ ತಂಡ ನಾಕೌಟ್​ ಹಂತಕ್ಕೇರುವ ಆಸೆ ವೃದ್ಧಿಸಿಕೊಂಡಿದೆ. ಸಿ ಗುಂಪಿನ ಮತ್ತೊಂದು ಪ್ರಬಲ ತಂಡ ತಮಿಳುನಾಡು ಕೂಡ ತನ್ನ 5ನೇ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿದೆ. ತಮಿಳುನಾಡು ಗೆದ್ದರೆ, ಕರ್ನಾಟಕದ ಜತೆಗೆ 21 ಅಂಕಗಳ ಸಮಬಲ ಸಾಧಿಸಲಿದ್ದು, ರನ್​ರೇಟ್​ನಲ್ಲಿ ಮೇಲುಗೈ ಸಾಧಿಸುವ ತಂಡಕ್ಕೆ ಅಗ್ರಸ್ಥಾನ ಒಲಿಯಲಿದೆ. ಸದ್ಯ ತ್ರಿಪುರ (14), ಗುಜರಾತ್​ (13) ಕ್ರಮವಾಗಿ 3,4ನೇ ಸ್ಥಾನದಲ್ಲಿವೆ. ಗುಂಪಿನ ಅಗ್ರ 2 ತಂಡಗಳಿಗೆ ಕ್ವಾರ್ಟರ್​ಫೈನಲ್​ಗೇರುವ ಅವಕಾಶವಿರುವುದರಿಂದ ರಾಜ್ಯ ತಂಡದ ಹಾದಿ ಸುಗಮಗೊಂಡಿದೆ. ಮುಂದಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಆಡಿದ ಬಳಿಕ ರಾಜ್ಯ ತಂಡ, ಫೆ. 16ರಿಂದ ಹುಬ್ಬಳ್ಳಿಯಲ್ಲಿ ಚಂಡೀಗಡ ಎದುರು ತನ್ನ ಕೊನೇ ಲೀಗ್​ ಪಂದ್ಯ ಆಡಲಿದೆ.