ಕ್ರೀಡೆ

ಸಚಿನ್​, ಕೊಹ್ಲಿ ಬ್ಯಾಟ್​ ಸರಿಮಾಡಿಕೊಡುತ್ತಿದ್ದ ವ್ಯಕ್ತಿಯ ಬದುಕು ಬಿಗಡಾಯಿಸಿದ ಕರೊನಾ!

ಮುಂಬೈ: ಕ್ರಿಕೆಟಿಗರ ಪಾಲಿಗೆ ಬ್ಯಾಟ್​ ಅತ್ಯಂತ ಶಕ್ತಿಶಾಲಿ ಆಯುಧ. ವಿಶ್ವದ ಎಲ್ಲ ಕ್ರಿಕೆಟಿಗರ ಯಶಸ್ಸಿನಲ್ಲೂ ಅವರ ಬ್ಯಾಟ್​ಗಳ ಪಾಲು ಕೂಡ ಪ್ರಮುಖವಾದುದು. ಆದರೆ ಕ್ರಿಕೆಟಿಗರು ಬಳಸುವ ಎಲ್ಲ ಬ್ಯಾಟ್​ಗಳು ಅವರ ಉಪಯೋಗಕ್ಕೆ ಯೋಗ್ಯವಾಗಿಯೇ ಅವರ ಕೈಸೇರುವುದಿಲ್ಲ. ಕೆಲ ಬ್ಯಾಟ್​ಗಳನ್ನು ಅವರ ಇಷ್ಟದಂತೆ ಬದಲಾಯಿಸಬೇಕಾಗುತ್ತದೆ. ಅವರಿಗೆ ಈ ಕೆಲಸಕ್ಕೆ ನೆರವಾಗುವವರು ಬ್ಯಾಟ್​ ಫಿಕ್ಸರ್​ಗಳು. ದಿಗ್ಗಜರಾದ ಸಚಿನ್​ ತೆಂಡುಲ್ಕರ್​ ಮತ್ತು ವಿರಾಟ್​ ಕೊಹ್ಲಿ ಅವರಿಗೆ ಬ್ಯಾಟ್​ಗಳು ಅವರಿಗೆ ಬೇಕಾದಂತೆ ಸರಿಮಾಡಿಕೊಡುತ್ತಿದ್ದ ವ್ಯಕ್ತಿಯೊಬ್ಬರು ಈಗ ಕರೊನಾ ಹಾವಳಿಯಿಂದಾಗಿ ತೀವ್ರ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ವಾಂಖೆಡೆ ಕ್ರೀಡಾಂಗಣದ ಬಳಿಕ ಶಾಪ್​ ಒಂದನ್ನು ಹೊಂದಿರುವ ಅಶ್ರಫ್​ ಚೌಧರಿ ಎಂಬವರು 70ರ ದಶಕದಿಂದಲೂ ಮುಂಬೈಗೆ ಬರುವ ಎಲ್ಲ ಬ್ಯಾಟ್ಸ್​ಮನ್​ಗಳಿಗೂ ಬ್ಯಾಟ್​ ಫಿಕ್ಸ್​ ಮಾಡಿ ಕೊಡುತ್ತಿದ್ದರು. ವಿದೇಶಿ ಕ್ರಿಕೆಟಿಗರಾದ ಸ್ಟೀವನ್​ ಸ್ಮಿತ್​ ಮತ್ತು ಫಾಫ್​ ಡು ಪ್ಲೆಸಿಸ್​ ಕೂಡ ಅವರಿಂದಲೇ ಬ್ಯಾಟ್​ ಸರಿಮಾಡಿಕೊಂಡಿದ್ದಾರೆ. ಬ್ಯಾಟ್​ನ ಎಲ್ಲ ಲೋಪದೋಷಗಳನ್ನು ಸರಿಮಾಡಿಕೊಡುವಲ್ಲಿ ಅವರು ಪರಿಣತರಾಗಿದ್ದರು. ಬ್ಯಾಟ್​ನ ಭಾರ ಇಳಿಸುವುದರಿಂದ ಅದರ ಹ್ಯಾಂಡ್ಲ್​ ಗ್ರಿಪ್​ ಸರಿಮಾಡಿಕೊಡುವವರೆಗೆ ಬ್ಯಾಟ್​​ಮನ್​ಗಳ ಎಲ್ಲ ಬೇಡಿಕೆಗಳನ್ನೂ ಅವರು ಪೂರೈಸುತ್ತಿದ್ದರು.

ಕರೊನಾ ಹಾವಳಿ ಶುರುವಾದ ಬಳಿಕ ಎಲ್ಲರ ಜೀವನವೂ ಬದಲಾಗಿರುವಂತೆ ಅಶ್ರಫ್​ ಚೌಧರಿ ಅವರ ಬದುಕು ಕೂಡ ಈಗ ಅಸ್ತವ್ಯಸ್ತವಾಗಿದೆ. ಕಿಡ್ನಿಸ್ಟೊನ್​ ಮತ್ತಿತರ ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಮುಂಬೈ ಹೊರವಲಯದ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವ ಅವರು ಈಗ ಸೂಕ್ತ ಚಿಕಿತ್ಸೆ ಪಡೆಯಲು ಹಣಕಾಸಿನ ಕೊರತೆ ಎದುರಿಸುತ್ತಿದ್ದಾರೆ. ಅವರ ಆಪ್ತರೊಬ್ಬರು ಹಣಕಾಸು ಹೊಂದಿಸಿಕೊಳ್ಳಲು ಮುಂದೆ ಬಂದಿದ್ದರೂ, ಹಾಲಿ ಪರಿಸ್ಥಿತಿಯಿಂದಾಗಿ ಅವರಿಗೆ ಸೂಕ್ತ ನೆರವು ಸಿಗುತ್ತಿಲ್ಲ.

ಲಾಕ್​ಡೌನ್​ ಶುರುವಾದ ಬಳಿಕ ಅವರ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಮುಂಬೈನಲ್ಲಿ ಕ್ರಿಕೆಟ್​ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧಗೊಂಡ ಕಾರಣದಿಂದಾಗಿ ಅವರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇದುವರೆಗೆ 2 ಲಕ್ಷ ರೂ. ಆರ್ಥಿಕ ನೆರವು ಅವರಿಗೆ ಲಭಿಸಿದ್ದು, ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿದ್ದಾರೆ.

ವಿಂಡೀಸ್​ ತಂಡಕ್ಕೆ 16 ಬ್ಯಾಟ್​ ಕೊಡುಗೆ ನೀಡಿದ್ದರು!

ಅಶ್ರಫ್​ ಚೌಧರಿ ಅವರ ಬದುಕು ಈ ವರ್ಷ ಕರೊನಾ ಹಾವಳಿ ಶುರುವಾಗುವವರೆಗೆ ಉತ್ತಮವಾಗಿಯೇ ಸಾಗುತ್ತಿತ್ತು. ಆದರೆ ಲಾಕ್​ಡೌನ್​ ನಂತರದಲ್ಲಿ ಕ್ರಿಕೆಟ್ ಬ್ಯಾಟ್​ ಕೇಳುವವರೇ ಇಲ್ಲದಂತಾಗಿ ಅವರ ಬದುಕು ಕೂಡ ಬರಿದಾಯಿತು. ಈ ವರ್ಷ ಐಪಿಎಲ್​ ಕೂಡ ವಿದೇಶದಲ್ಲಿ ನಡೆಯುತ್ತಿರುವುದರಿಂದ ಅವರ ಬ್ಯಾಟ್​ಗಳಿಗೆ ಬೇಡಿಕೆ ಇಲ್ಲದಂತಾಗಿದೆ. 2016ರಲ್ಲಿ ಟಿ20 ವಿಶ್ವಕಪ್​ ಆಡಲು ಭಾರತಕ್ಕೆ ಬಂದಿದ್ದ ವೆಸ್ಟ್​ ಇಂಡೀಸ್​ ತಂಡದ ಎಲ್ಲ 16 ಆಟಗಾರರಿಗೆ ಅವರು ತಲಾ 1 ಬ್ಯಾಟ್​ ಉಡುಗೊರೆಯಾಗಿ ನೀಡಿದ್ದರು. ಆ ಸಮಯದಲ್ಲಿ ವಿಂಡೀಸ್​ ಕ್ರಿಕೆಟಿಗರು ಮತ್ತು ಮಂಡಳಿಯ ನಡುವೆ ವೇತನ ವಿವಾದ ನಡೆಯುತ್ತಿದ್ದ ಕಾರಣ ಅವರು ವಿಂಡೀಸ್​ ಆಟಗಾರರಿಗೆ ಈ ಮೂಲಕ ನೆರವಾಗಿದ್ದರು.