ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಹಳಸಿದ ಆಹಾರ ವಿತರಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಚೈತನ್ಯ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದು, ಕತಾರ್ ಏರ್‌ವೇಸ್ ಫ್ಯಾನ್ಸ್ ಟೆರೇಸ್ ಸ್ಟ್ಯಾಂಡ್‌ನಿಂದ ತನ್ನ ಸ್ನೇಹಿತ ಗೌತಮ್ ಅವರೊಂದಿಗೆ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ವೇಳೆ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಮೇ 12ರಂದು ಚೈತನ್ಯ ಹಾಗೂ ಅವರ ಸ್ನೇಹಿತ ಗೌತಮ್ ಪಂದ್ಯ ವೀಕ್ಷಿಸಲೆಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಕತಾರ್ ಏರ್‌ವೇಸ್ ಫ್ಯಾನ್ಸ್ ಟೆರೇಸ್ ಸ್ಟ್ಯಾಂಡ್‌ನಲ್ಲಿ ಅವರು ಕ್ಯಾಂಟೀನ್‌ನಲ್ಲಿ ಇಡ್ಲಿ, ಗೀರೈಸ್, ಚನ್ನಾಮಸಾಲಾ, ಕಟ್ಲೆಟ್, ಡ್ರೈ ಜಾಮೂನ್ ಸೇವಿಸಿದ್ದಾರೆ.
ಇದಾದ ಕೆಲಕ್ಷಣದ ಬಳಿಕ ಅವರ ಆರೋಗ್ಯ ಹದಗೆಟ್ಟಿದ್ದು, ಕುಳಿತಲ್ಲೇ ಕುಸಿದು ಬಿದ್ದಿದ್ದಾರೆ. ಕ್ರೀಡಾಂಗಣದ ಸಿಬ್ಬಂದಿಯ ನೆರವಿನೊಂದಿಗೆ ಕ್ರೀಡಾಂಗಣದ ಹೊರಗೆ ಆಂಬುಲೆನ್ಸ್‌ನಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಚೈತನ್ಯ ಅವರನ್ನು ಪರೀಕ್ಷಿಸಿ ಫುಡ್ ಪಾಯ್ಸನಿಂಗ್ನಿಂದ ಬಳಲುತ್ತಿರುವುದು ದೃಢಪಟ್ಟಿದೆ.
ಚೈತನ್ಯ ಅವರ ಆರೋಗ್ಯ ಹದಗೆಡಲು ಕ್ಯಾಂಟೀನ್‌ನಲ್ಲಿ ನೀಡಲಾದ ಆಹಾರ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ FIR ದಾಖಲಿಸಿಕೊಳ್ಳಲಾಗಿದ್ದುಮ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.