ಕ್ರೀಡೆ

ಈ ಬಾರಿ ಐಪಿಎಲ್​ಗೆ ಮಹಿಳಾ ಹರಾಜುಗಾರ್ತಿ? ಮಲ್ಲಿಕಾ ಮೇಲೆ ಬಿಸಿಸಿಐ ಕಣ್ಣು!

ನವದೆಹಲಿ: ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡುತ್ತ ಬಂದಿರುವ ಇಂಗ್ಲೆಂಡ್​ನ ಹ್ಯೂ ಎಡ್​ಮೀಡ್ಸ್​ ಈ ಬಾರಿ ಗೈರಾಗುತ್ತಿದ್ದಾರೆ. ಅವರ ಬದಲಿಗೆ ಹೊಸ ಹರಾಜುಗಾರರನ್ನು ಬಿಸಿಸಿಐ ಹುಡುತ್ತಿದ್ದು, ಐಪಿಎಲ್​ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಹರಾಜುಗಾರ್ತಿಗೆ ಹೊಣೆ ವಹಿಸುವ ಸಾಧ್ಯತೆ ಕಾಣಿಸಿದೆ.

ಮಹಿಳೆಯರ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆಯನ್ನು ಕಳೆದ ವರ್ಷ ಯಶಸ್ವಿಯಾಗಿ ನಡೆಸಿಕೊಟ್ಟಿರುವ ಮಲ್ಲಿಕಾ ಸಾಗರ್​, ಈ ಸಲವೂ ಡಿಸೆಂಬರ್​ 9ರಂದು ಡಬ್ಲ್ಯುಪಿಎಲ್​ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ. ನಂತರ ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯ ಜವಾಬ್ದಾರಿಯನ್ನೂ ಅವರಿಗೆ ನೀಡಲು ಬಿಸಿಸಿಐ ವಲಯದಲ್ಲಿ ಚಿಂತನೆ ನಡೆದಿದೆ.

ಮುಂಬೈನಲ್ಲಿ ಕಲಾಕೃತಿಗಳ ಹರಾಜು ಪ್ರಕ್ರಿಯೆ ನಡೆಸಿದ ಅನುಭವ ಹೊಂದಿದ್ದ ಮಲ್ಲಿಕಾ ಸಾಗರ್​ 2021ರಲ್ಲಿ ಪ್ರೊ ಕಬಡ್ಡಿ ಲೀಗ್​ ಆಟಗಾರರ ಹರಾಜು ಪ್ರಕ್ರಿಯೆಯನ್ನೂ ನಡೆಸಿದ್ದರು.