ಕ್ರೀಡೆ

ಸೇಡಿನ ತವಕದಲ್ಲಿ ಆರ್‌ಸಿಬಿ; ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಹೀಗಿರಲಿದೆ ಪ್ಲೆಸಿಸ್​ ಪಡೆ

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 45ನೇ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಗುಜರಾತ್​ ಟೈಟಾನ್ಸ್​ ಮುಖಾಮುಖಿಯಾಗಲಿದ್ದು, ಸತತ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿರುವ ಫಾಫ್​ ಡು ಪ್ಲೆಸಿಸ್​ ಪಡೆಯೂ ಲಯ ಕಾಯ್ದುಕೊಳ್ಳುವ ಮೂಲಕ ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಸಜ್ಜಾಗುತ್ತಿದೆ.

ಏಪ್ರಿಲ್​ 25ರಂದು ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಆರ್​ಸಿಬಿ 35ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನೂ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹೇಳಲಾಗಿದ್ದು, ಸಮತೋಲತೆ ವಿಚಾರವಾಗಿ ಒಂದೆರಡು ಬದಲಾವಣೆ ನಿಶ್ಚಿತ ಎಂದು ಹೇಳಲಾಗಿದೆ.

ಕಳೆದ ಪಂದ್ಯದಲ್ಲಿ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದ ಸ್ವಪ್ನಿಲ್​ ಸಿಂಗ್​ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದು, ಕರ್ಣ್​ ಶರ್ಮಾ ಹಾಗೂ ವಿಲ್​ ಜ್ಯಾಕ್ಸ್​ರೊಟ್ಟಿಗೆ ಸ್ಪಿನ್​ ವಿಭಾಗಕ್ಕೆ ಬಲ ತುಂಬಲು ಸಜ್ಜಾಗಿದ್ದಾರೆ. ಇನ್ನೂ ವಿದೇಶಿ ಆಟಗಾರರ ವಿಚಾರಕ್ಕೆ ಬರುವುದಾದರೆ ಲಾಕಿ ಫರ್ಗ್ಯೂಸನ್​ ಬದಲಿಗೆ ರೀಸ್​ ಟಾಪ್ಲೆ ಅಥವಾ ಟಾಮ್​ ಕರ್ರನ್​ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಲಾಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಲಾಕಿ ಫರ್ಗ್ಯೂಸನ್​ ಬದಲಿಯಾಗಿ ಬೇರೊಬ್ಬ ಆಟಗಾರನನ್ನು ಕಣಕ್ಕಿಳಿಸುವ ಬಗ್ಗೆ ಆರ್​ಸಿಬಿ ಚಿಂತಿಸಿಲ್ಲ ಎಂದು ವರದಿಯಾಗಿದೆ. ಏಕೆಂದರೆ ಗುಜರಾತ್​ ಟೈಟಾನ್ಸ್​ ಪರ ಆಡಿದ್ದ ಅನುಭವ ಹೊಂದಿರುವ ಲಾಕಿ ಫರ್ಗ್ಯೂಸನ್​ ಬದಲಿಗೆ ಬೇರೊಬ್ಬ ಆಟಗಾರನಿಗೆ ಆರ್​ಸಿಬಿ ಮಣೆ ಹಾಕುವುದು ಡೌಟ್​ ಎನ್ನಲಾಗಿದೆ. ಉಳಿದಂತೆ ಟಾಪ್​ ಆರ್ಡರ್​ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಸೇಡಿನ ತವಕದಲ್ಲಿ ಆರ್​ಸಿಬಿ

ಕಳೆದ ವರ್ಷ ನಡೆದ ಲೀಗ್​ನ ಅಂತಿಮ ಪಂದ್ಯದಲ್ಲಿ ಶುಭಮನ್​ ಗಿಲ್​ ಶತಕದ ನೆರವಿನಿಂದ ಗುಜರಾತ್​ ಟೈಟಾನ್ಸ್ ತಂಡವು ಆರ್​ಸಿಬಿಯನ್ನು ಪ್ಲೇಆಫ್​ ಅವಕಾಶದಿಂದ ವಂಚಿತರಾಗುವಂತೆ ಮಾಡಿತ್ತು.  ಉತ್ತಮ ರನ್‌ರೇಟ್ ಜತೆಗೆ 14 ಅಂಕ ಹೊಂದಿದ್ದ ಆರ್‌ಸಿಬಿ ಕನಿಷ್ಠ ಜಯ ಸಾಧಿಸಿದರೆ ಅಗ್ರ 4ರಲ್ಲಿ ಸ್ಥಾನ ಪಡೆಯುವ ಅವಕಾಶ ಹೊಂದಿತ್ತು. ಅಂದಿನ ಪಂದ್ಯದಲ್ಲಿ ಶುಭಮಾನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಶತಕ ಸಿಡಿಸಿ ಅಜೇಯವಾಗಿ ಉಳಿದಿದ್ದರು. ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿ ಫಾಫ್​ ಡು ಪ್ಲೆಸಿಸ್​ ಪಡೆ ಸಜ್ಜಾಗುತ್ತಿದೆ.