ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಿ. ಕೂಲ್ ಎಂದೇ ಪ್ರಖ್ಯಾತರು. ಎದುರಾಳಿ ತಂಡದವರು ಭಾರತೀಯ ಬೌಲರ್ಗಳನ್ನು ಚೆಂಡಾಡುತ್ತಿದ್ದರೂ, ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಮರಳಿಸುವ ರಣತಂತ್ರವನ್ನು ಕೂಲಾಗಿ ರೂಪಿಸುತ್ತಿದ್ದರು ಎಂಬ ಮಾತು ಕ್ರಿಕೆಟ್ ವಿಶ್ವದಲ್ಲಿ ಜನಜನಿತವಾಗಿದೆ.
ಇಂಥ ಧೋನಿ ಮೈದಾನದಲ್ಲಿ ಒಮ್ಮೆ ತಮ್ಮ ಬೌಲರ್ ಒಬ್ಬರ ಮೇಲೆ ಸಿಟ್ಟಾಗಿ, ಕೂಗಾಡಿದ್ದರಂತೆ. ಅದೂ 20 ವರ್ಷಗಳ ಬಳಿಕ ಅವರಿಗೆ ಆ ಪರಿಯ ಸಿಟ್ಟು ಬಂದಿತ್ತಂತೆ. ಈ ಘಟನೆಯನ್ನು ಧೋನಿ ಅವರಿಂದ ಬೈಸಿಕೊಂಡ ಬೌಲರ್ನ ಬಾಯಲ್ಲೇ ಕೇಳೋಣ.
ಅದು 2017ರ ಡಿಸೆಂಬರ್. ಇಂದೋರ್ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ 2ನೇ ಪಂದ್ಯ. ಇಂದೋರ್ನ ಮೈದಾನದಲ್ಲಿ ಬೌಂಡರಿ ಗೆರೆ ತುಂಬಾ ಸಣ್ಣದಾಗಿದೆ. ಶ್ರೀಲಂಕಾದ ಕುಶಲ್ ಪೆರೇರಾ ಬ್ಯಾಟಿಂಗ್ ಮಾಡುತ್ತಿದ್ದರೆ ಭಾರತದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ಕುಶಲ್ ಪೆರೇರಾ ಕವರ್ ವಿಭಾಗದಲ್ಲಿ ಚೆಂಡನ್ನು ಬೌಂಡರಿಗಟ್ಟಿದ್ದರು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಧೋನಿ, ಫೀಲ್ಡಿಂಗ್ ಅನ್ನು ಬದಲಿಸುವಂತೆ ಕುಲದೀಪ್ ಯಾದವ್ಗೆ ಸೂಚಿಸಿದರು.
ಧೋನಿಯ ಮಾತು ಕೇಳಿಸಿದರೂ, ಕೇಳಿಸದವರಂತೆ ತಮ್ಮ ಬೌಲಿಂಗ್ ಮಾರ್ಕ್ಗೆ ಮರಳಿದ ಕುಲದೀಪ್ ಯಾದವ್ ಮತ್ತೊಂದು ಎಸೆತ ಹಾಕಿದರು. ರಿವರ್ಸ್ ಸ್ವೀಪ್ ಮಾಡಿದ ಕುಶಲ್ ಪರೇರಾ ಮತ್ತೊಂದು ಬೌಂಡರಿ ಸಿಡಿಸುತ್ತಿದ್ದಂತೆ ವಿಕೆಟ್ ಹಿಂದಿನಿಂದ ಧೋನಿ ಸಿಡಿದಿದ್ದರು!
ನನ್ನೇನು ಹುಚ್ಚಾ ಎಂದು ಭಾವಿಸಿದ್ದೀಯಾ? ನಾನು 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ್ದೇನೆ. ಆ ಅನುಭವದಿಂದಲೇ ನಾನು ನಿನಗೆ ಫೀಲ್ಡಿಂಗ್ ಬದಲಿಸಲು ಸಲಹೆ ಕೊಡುತ್ತಿದ್ದೇನೆ... ಸುಮ್ಮನೆ ಫೀಲ್ಡಿಂಗ್ ಬದಲಿಸು... ಎಂದು ಅಬ್ಬರಿಸಿದರು.
ಆಗ ನನಗೆ ನಿಜಕ್ಕೂ ನಡುಕ ಉಂಟಾಯಿತು. ಅವರು ಹೇಳಿದಂತೆ ಫೀಲ್ಡಿಂಗ್ ಬದಲಿಸಿದೆ. ಮರು ಎಸೆತದಲ್ಲೇ ನನಗೆ ವಿಕೆಟ್ ದಕ್ಕಿತು ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.
ಲಾಕ್ಡೌನ್ನಿಂದಾಗಿ ಸದ್ಯ ಕಾನ್ಪುರದ ಮನೆಯಲ್ಲಿ ಬಂದಿಯಾಗಿರುವ ಕುಲದೀಪ್ ಯಾದವ್, ಕ್ರಿಕೆಟ್ ಕಾರ್ಯಕ್ರಮದ ನಿರೂಪಕ ಜತಿನ್ ಸಪ್ರು ಅವರ ಎಎಸ್ಎಪಿ ವಿತ್ ಜೆಎಸ್ಎಪಿ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಆ ಪಂದ್ಯದಲ್ಲಿ ನಾನು 52ಕ್ಕೆ 3 ವಿಕೆಟ್ ಕಬಳಿಸಿದ್ದೆ. ಇದಕ್ಕೂ ಮುನ್ನ ಆರಂಭಿಕ ರೋಹಿತ್ ಶರ್ಮ 35 ಎಸೆತಗಳಲ್ಲಿ ಗಳಿಸಿದ್ದ ಶತಕದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತ್ತು. ಹಾಗಾಗಿ ಭಾರತಕ್ಕೆ 88 ರನ್ಗಳ ಗೆಲುವು ದಕ್ಕಿತು ಎಂದು ವಿವರಿಸಿದ್ದಾರೆ.
ಪಂದ್ಯ ಮುಗಿದ ಬಳಿಕವೂ ಧೋನಿ ಜತೆ ಮಾತನಾಡಲು ಹೆದರಿಕೆಯಾಗುತ್ತಿತ್ತು. ಆದರೂ ಧೈರ್ಯ ಮಾಡಿ ಟೀಂ ಬಸ್ನಲ್ಲಿ ಅವರ ಬಳಿ ಹೋಗಿ ಮಾತನಾಡಿದಾಗ ಅವರು ಸಮಾಧಾನವಾಗಿಯೇ ಮಾತನಾಡಿದರು. ನಿಮಗೆ ಈ ಹಿಂದೆ ಇಷ್ಟೊಂದು ಸಿಟ್ಟು ಬಂದಿತ್ತೇ ಎಂದು ಪ್ರಶ್ನಿಸಿದ್ದಕ್ಕೆ 20 ವರ್ಷಗಳ ಹಿಂದೆ ಒಮ್ಮೆ ಹೀಗೆಯೇ ವಿಪರೀತ ಸಿಟ್ಟು ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾಗಿ ಹೇಳಿದ್ದಾರೆ.