ಕ್ರೀಡೆ

ಎಸ್​ಆರ್​ಎಚ್​ ವಿರುದ್ಧ ಹೀನಾಯ ಸೋಲು! ಸ್ಟೇಡಿಯಂನಲ್ಲೇ ರಾಹುಲ್​ ವಿರುದ್ಧ ಎಲ್​ಎಸ್​ಜಿ ಮಾಲೀಕ ಆಕ್ರೋಶ

ಹೈದರಾಬಾದ್​: ನಿನ್ನೆ (ಮೇ 07) ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ (ಎಲ್​ಎಸ್​ಜಿ) ಹೀನಾಯವಾಗಿ ಸೋತಿತ್ತು. ಮೊದಲು ಬ್ಯಾಟ್​ ಮಾಡಿ 165 ರನ್ ಗಳಿಸಿದ ಲಖನೌ, ಕೇವಲ 9.4 ಓವರ್‌ಗಳಲ್ಲಿ ಎಸ್​ಆರ್​ಎಚ್​​ಗೆ ಗುರಿಯನ್ನು ಒಪ್ಪಿಸಿರು. ಈ ಕೆಟ್ಟ ಆಟದಿಂದ ಬೇಸತ್ತ ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ, ನಾಯಕ ಕೆ.ಎಲ್. ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂದ್ಯದ ನಂತರ ಮೈದಾನದಲ್ಲಿ ರಾಹುಲ್ ಜೊತೆ ತುಂಬಾ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಲಖನೌ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಮಾಲೀಕ ಒಬ್ಬ ಆಟಗಾರನ ಜೊತೆ ಈ ರೀತಿ ನಡೆದುಕೊಳ್ಳುವುದು ಸರಿಯೇ ಎಂದು ಎಂದು ಸಿಟ್ಟಾಗಿದ್ದಾರೆ.

ಪಂದ್ಯದ ಬಗ್ಗೆ ವಿವರಿಸಲು ಕೆ.ಎಲ್.ರಾಹುಲ್ ಪ್ರಯತ್ನಿಸುತ್ತಿದ್ದರು ಆದರೆ, ಸಂಜೀವ್ ಗೋಯೆಂಕಾ ಮಾತ್ರ ರಾಹುಲ್​ ಮಾತನ್ನು ಕೇಳಲು ತಯಾರಿರಲಿಲ್ಲ. ತುಂಬಾ ಕೋಪದಿಂದ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ದುರಾದೃಷ್ಟವಶಾತ್, ಕೆ.ಎಲ್ ರಾಹುಲ್ ಈಗಾಗಲೇ ಸೋಲಿನಿಂದ ಸಂಕಟಪಡುತ್ತಿರುವಾಗ ಸಂಜೀವ್ ಗೋಯೆಂಕಾ ಅವರು ಮಾತುಗಳು ಇನ್ನಷ್ಟು ನೋಯಿಸಿರುವುದು ರಾಹುಲ್​ ಮುಖದಲ್ಲಿ ಕಾಣುತ್ತಿದೆ. ವಿಡಿಯೋ ನೋಡಿದವರೆಲ್ಲ ಸಂಜೀವ್ ಗೋಯೆಂಕಾ ಅವರನ್ನು ಟೀಕಿಸುತ್ತಿದ್ದಾರೆ. ಆಟಗಾರರನ್ನು ಎಲ್ಲರ ಎದುರು ನಿಂದಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ.

ಇನ್ನೂ ಈ ಪಂದ್ಯ ಸೋತರೂ ಲಖನೌಗೆ ಪ್ಲೇ ಆಫ್‌ಗೆ ಹೋಗಲು ಇನ್ನೂ ಅವಕಾಶವಿದೆ. ಇನ್ನೂ ಎರಡು ಪಂದ್ಯಗಳು ಉಳಿದಿವೆ, ಆ ಎರಡು ಪಂದ್ಯಗಳಲ್ಲಿ ಗೆದ್ದರೆ ಲಖನೌ ಪ್ಲೇ ಆಫ್‌ಗೆ ಹೋಗುತ್ತದೆ ಮತ್ತು ಕಪ್​ ಗೆಲ್ಲುವ ಅವಕಾಶವೂ ಇದೆ. ಆದರೆ ಸಂಜೀವ್ ಗೋಯೆಂಕಾ ಮಾತ್ರ ಹೀನಾಯ ಸೋಲಿನಿಂದಾಗಿ ತುಂಬಾ ಕೋಪಗೊಂಡಿದ್ದು, ರಾಹುಲ್ ಜೊತೆ ಸರಿಯಾಗಿ ನಡೆದುಕೊಂಡಿಲ್ಲ ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿಗಳು.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಆರಂಭಿಕರಾದ ಕೆ.ಎಲ್.ರಾಹುಲ್ 33 ಎಸೆತಗಳಲ್ಲಿ 29 ರನ್, ಕ್ವಿಂಟನ್ ಡಿ ಕಾಕ್ 2, ಸ್ಟೊಯಿನಿಸ್ 3, ಕೃನಾಲ್ ಪಾಂಡ್ಯ 24 ರನ್ ಗಳಿಸಿ ದಯನೀಯವಾಗಿ ವಿಫಲರಾದರು. ಅಂತಿಮವಾಗಿ ಪೂರನ್ 48 ಮತ್ತು ಆಯುಷ್ ಬಡೋನಿ 55 ರನ್ ಗಳಿಸಿದರು. ಎಸ್​ಆರ್​ಎಚ್ ಬೌಲರ್​ಗಳ ಪೈಕಿ ಭುವನೇಶ್ವರ್ ಕುಮಾರ್ 2 ವಿಕೆಟ್ ಹಾಗೂ ನಾಯಕ ಕಮಿನ್ಸ್ ಒಂದು ವಿಕೆಟ್ ಪಡೆದರು.

166 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಎಸ್‌ಆರ್‌ಎಚ್ ಕೇವಲ 9.4 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ನಷ್ಟವಿಲ್ಲದೆ ಗುರಿಯನ್ನು ಮುಟ್ಟಿತು. ಆರಂಭಿಕರಾದ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 75 ರನ್ ಹಾಗೂ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 89 ರನ್​ಗಳಿಸಿ ಚಂಡಮಾರುತ ಸೃಷ್ಟಿಸಿದರು. (ಏಜೆನ್ಸೀಸ್​)