Sanjeev Goenka : ನಿನ್ನೆ (ಏಪ್ರಿಲ್ 01) ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ 13ನೇ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಈ ಸೀಸನ್ನಲ್ಲಿ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಲಖನೌಗೆ ಇದು ಎರಡನೇ ಸೋಲು. ಪಂದ್ಯದಲ್ಲಿ ಲಖನೌ ಸೋಲುತ್ತಿದ್ದಂತೆ ಎಲ್ಲರ ಗಮನ ಒಬ್ಬ ವ್ಯಕ್ತಿಯ ಮೇಲೆ ಬಿದ್ದಿತ್ತು. ಆತ ಬೇರೆ ಯಾರೂ ಅಲ್ಲ, ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ.
ಲಖನೌ ಪಂದ್ಯ ಸೋತಾಗ, ಮೈದಾನಕ್ಕೆ ಆಗಮಿಸಿದ ಗೋಯೆಂಕಾ, ನಾಯಕ ರಿಷಭ್ ಪಂತ್‌ಗೆ ಬೆರಳು ತೋರಿಸುತ್ತಾ ಬಹಳ ಗಂಭೀರವಾಗಿ ಮಾತನಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ನಿಕೋಲಸ್ ಪೂರನ್ (44 ರನ್, 30 ಎಸೆತ, 5 ಬೌಂಡರಿ, 2 ಸಿಕ್ಸರ್) ಮತ್ತು ಆಯುಷ್ ಬಡೋನಿ (41 ರನ್, 33 ಎಸೆತ, 1 ಬೌಂಡರಿ, 3 ಸಿಕ್ಸರ್) ಲಖನೌ ಪರ ಮಿಂಚಿದರೆ, ನಾಯಕ ರಿಷಭ್ ಪಂತ್ (2) ಮತ್ತು ಮಿಚೆಲ್ ಮಾರ್ಷ್ (0) ದಯನೀಯವಾಗಿ ವಿಫಲರಾದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರು. ಜಾನ್ಸನ್, ಚಾಹಲ್, ಮ್ಯಾಕ್ಸ್‌ವೆಲ್ ಮತ್ತು ಫರ್ಗುಸನ್ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ ಪಂಜಾಬ್, ಪ್ರಭ್‌ಸಿಮ್ರಾನ್ ಸಿಂಗ್ (69 ರನ್, 34 ಎಸೆತ, 9 ಬೌಂಡರಿ, 3 ಸಿಕ್ಸರ್), ನಾಯಕ ಶ್ರೇಯಸ್ ಅಯ್ಯರ್ (ಔಟಾಗದೇ 52 ರನ್, 30 ಎಸೆತ, 3 ಬೌಂಡರಿ, 4 ಸಿಕ್ಸರ್), ನೇಹಾಲ್ ವಾಧೇರಾ (ಔಟಾಗದೆ 43 ರನ್, 25 ಎಸೆತ, 3 ಬೌಂಡರಿ, 4 ಸಿಕ್ಸರ್) ಅಮೋಘ ಬ್ಯಾಟಿಂಗ್ ನೆರವಿನಿಂದ ಕೇವಲ 1 ವಿಕೆಟ್ ನಷ್ಟಕ್ಕೆ ಪಂಜಾಬ್ ಗೆಲುವಿನ ಗುರಿಯನ್ನು ಮುಟ್ಟಿತು.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಮೈದಾನಕ್ಕೆ ಬಂದು, ರಿಷಭ್ ಪಂತ್ ಅವರೊಂದಿಗೆ ಬಹಳ ಗಂಭೀರವಾಗಿ ಚರ್ಚೆ ನಡೆಸಿದರು. ಅವರ ಚರ್ಚೆಯ ಸಮಯದಲ್ಲಿ, ಗೋಯೆಂಕಾ ಕೆಲವು ಬಾರಿ ಪಂತ್ ಕಡೆಗೆ ಬೆರಳು ತೋರಿಸಿದರು. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಂಡದ ಪ್ರದರ್ಶನದಿಂದ ಗೋಯೆಂಕಾ ಇನ್ನೂ ಅತೃಪ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅದರಲ್ಲೂ ಪಂತ್ ಅವರನ್ನು 27 ಕೋಟಿ ಕೊಟ್ಟು ಹರಾಜಿನಲ್ಲಿ ಖರೀದಿ ಮಾಡಿದರು. ಆದರೆ, ಇದುವರೆಗೆ ಕನಿಷ್ಠ 27 ರನ್ ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ವಿರುದ್ಧ ಗೋಯೆಂಕಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಆಟದಲ್ಲಿ ಇದೆಲ್ಲ ಸಹಜ ಇಷ್ಟಕ್ಕೆ ಪಂತ್ ಕಡೆಗೆ ಬೆರಳು ತೋರಿಸುವುದು ಸರಿಯಲ್ಲ ಎಂದು ಕೆಲ ನೆಟ್ಟಿಗರು ಗೋಯೆಂಕಾ ವಿರುದ್ಧ ಮುಗಿಬಿದ್ದಿದ್ದಾರೆ. ಇದೇ ರೀತಿ ವರ್ತಿಸಿದ್ರೆ ಪಂತ್ ಕೂಡ ನಿಮ್ಮ ತಂಡ ಬಿಟ್ಟು ಹೋಗ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಲಖನೌ ನಾಯಕ ಕೆ.ಎಲ್. ರಾಹುಲ್ ಬಗ್ಗೆಯೂ ಗೋಯೆಂಕಾ ಅವರು ಗಂಭೀರವಾಗಿ ಮಾತನಾಡಿದ್ದರು. ಅದೂ ಸಹ, ಎಲ್ಲ ಕ್ಯಾಮೆರಾಗಳ ಮುಂದೆ. ನಾಯಕನನ್ನು ಈ ರೀತಿ ನಡೆಸಿಕೊಂಡ ಬಗ್ಗೆ ಆ ಸಮಯದಲ್ಲಿ ಭಾರಿ ವಿವಾದ ಹುಟ್ಟು ಹಾಕಿತ್ತು. ಈ ಘಟನೆಗಳ ಬಳಿಕ ಕೆ.ಎಲ್. ರಾಹುಲ್ ತಂಡವನ್ನು ತೊರೆದರು. ಅವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.