ಕ್ರೀಡೆ

6 ಬ್ಯಾಟ್ಸ್​ಮನ್​ ಡಕ್​, ಮೂವರು ತಲಾ 1 ರನ್, 7ಕ್ಕೆ ಆಲೌಟ್​! ಟಿ20 ಇತಿಹಾಸದಲ್ಲೇ ಕಡಿಮೆ ಸ್ಕೋರ್​ ದಾಖಲು | Lowest score

Lowest score : ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ತಂಡವೆಂಬ ಅಪಖ್ಯಾತಿಗೆ ಐವರಿ ಕೋಸ್ಟ್ ಗುರಿಯಾಗಿದೆ. ಟಿ20 ವಿಶ್ವಕಪ್-2026 ಆಫ್ರಿಕಾದ ಉಪ-ಪ್ರಾದೇಶಿಕ ಅರ್ಹತಾ ಪಂದ್ಯಗಳ ಭಾಗವಾಗಿ ನೈಜೀರಿಯಾ ವಿರುದ್ಧ ನಿನ್ನೆ (ನ.24) ನಡೆದ ಪಂದ್ಯದಲ್ಲಿ ಐವರಿ ಕೋಸ್ಟ್ ಕೇವಲ 7 ರನ್‌ಗಳಿಗೆ ಆಲೌಟ್ ಆಯಿತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

ಇದಕ್ಕೂ ಮೊದಲು, ಕಡಿಮೆ ಟಿ20 ಸ್ಕೋರ್ ಮಾಡಿದ ದಾಖಲೆ ಇಸ್ಲೇ ಆಫ್​ ಮ್ಯಾನ್​ ಹಾಗೂ ಮಂಗೋಲಿಯಾ ತಂಡಗಳ ಹೆಸರಿನಲ್ಲಿತ್ತು. ಈ ಹಿಂದೆ ಈ ಎರಡು ತಂಡಗಳು 10 ರನ್‌ಗಳಿಗೆ ಆಲೌಟ್ ಆಗಿದ್ದವು. ಇಸ್ಲೇ ಆಫ್​ ಮ್ಯಾನ್​ ತಂಡ 2023ರಲ್ಲಿ ಸ್ಪೇನ್​ ವಿರುದ್ಧ 10 ರನ್​ ಕಲೆಹಾಕಿತ್ತು. ಅದೇ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಮಂಗೋಲಿಯಾ ತಂಡ ಸಿಂಗಾಪುರ್​ ವಿರುದ್ಧ 10 ರನ್​ಗೆ ಆಲೌಟ್​ ಆಗಿತ್ತು.

ಇನ್ನು ನೈಜೀರಿಯಾ ಮತ್ತು ಐವರಿ ಕೋಸ್ಟ್ ನಡುವಿನ ಪಂದ್ಯದ ವಿಷಯಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೈಜೀರಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 271 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ವಿಕೆಟ್ ಕೀಪರ್ ಸೆಲಿಮ್ ಸಲೋ ಅವರ ವಿಧ್ವಂಸಕ ಶತಕ ( 112 ರನ್​, 53 ಎಸೆತ, 13 ಬೌಂಡರಿ ಹಾಗೂ 2 ಸಿಕ್ಸರ್) ದಿಂದಾಗಿ ನೈಜೀರಿಯಾ ತಂಡ ದೊಡ್ಡ ಮೊತ್ತವನ್ನು ಪೇರಿಸಿತು.

ನೈಜೀರಿಯಾ ಇನಿಂಗ್ಸ್‌ನಲ್ಲಿ ಐಸಾಕ್ ಒಕ್ಪೆ (23 ಎಸೆತಗಳಲ್ಲಿ ಔಟಾಗದೆ 65) ಮತ್ತು ಸುಲೇಮಾನ್ (29 ಎಸೆತಗಳಲ್ಲಿ 50 ರನ್​) ಅದ್ಭುತ ಅರ್ಧಶತಕ ಗಳಿಸಿದರು. ಐವರಿ ಕೋಸ್ಟ್ ಬೌಲರ್‌ಗಳಲ್ಲಿ ಪಂಬಾ ಡಿಮಿಟ್ರಿ ಮತ್ತು ವಿಲ್‌ಫ್ರೆಡ್ ಟ್ಯಾಲೊ ವಿಕೆಟ್ ಪಡೆದರು. ಉಳಿದಂತೆ ಯಾವೊಬ್ಬ ಬೌಲರ್​ ವಿಕೆಟ್​ ಪಡೆಯಲಿಲ್ಲ.

ಇದಾದ ಬಳಿಕ ಬೃಹತ್ ಗುರಿಯತ್ತ ಸಾಗಿದ ಐವರಿ ಕೋಸ್ಟ್ ಕೇವಲ 7.3 ಓವರ್​ಗಳಲ್ಲಿ 7 ರನ್​ಗಳಿಗೆ ಆಲೌಟಾಯಿತು. ಇದರಿಂದಾಗಿ ನೈಜೀರಿಯಾ ತಂಡ 264 ರನ್​ಗಳ ಬೃಹತ್ ಅಂತರದಿಂದ ಜಯ ಸಾಧಿಸಿತು. ಐವರಿ ಕೋಸ್ಟ್ ಇನ್ನಿಂಗ್ಸ್‌ನಲ್ಲಿ ಆರು ಬ್ಯಾಟ್ಸ್‌ಮನ್‌ಗಳು ಡಕ್ ಆಗಿದ್ದರೆ, ಮೂವರು ಬ್ಯಾಟ್ಸ್‌ಮನ್‌ಗಳು ತಲಾ ಒಂದು ರನ್ ಗಳಿಸಿದರು. ಆರಂಭಿಕ ಆಟಗಾರ ಮೊಹಮ್ಮದ್ ಗಳಿಸಿದ ನಾಲ್ಕು ರನ್‌ಗಳು ಗರಿಷ್ಠ ಸ್ಕೋರ್ ಆಯಿತು. ಈ ತಂಡದ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಬೌಂಡರಿ ಕೂಡ ಬರಲಿಲ್ಲ. (ಏಜೆನ್ಸೀಸ್​)