ಕ್ರೀಡೆ

ಗುಕೇಶ್​ ಚದುರಂಗ ಚಕ್ರವರ್ತಿಯಾಗಲು ಕಾರಣವಾದ ಲಿರೆನ್​ ಎಡವಟ್ಟಿನ ನಡೆ; ಇಲ್ಲಿದೆ ಆ ದಾಳದ ಪೂರ್ಣ ವಿವರಣೆ...

ಬೆಂಗಳೂರು: ವಿಶ್ವ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಭಾರತದ ಡಿ. ಗುಕೇಶ್​ ಆರಂಭದಿಂದಲೇ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ ಅವರ ಆಕ್ರಮಣಕಾರಿ ಆಟಗಳಿಗೆಲ್ಲ ಚೀನಾದ ಡಿಂಗ್​ ಲಿರೆನ್​ ದಿಟ್ಟ ತಿರುಗೇಟು ನೀಡುವ 14ನೇ ಹಾಗೂ ಕೊನೇ ಪಂದ್ಯದವರೆಗೂ ಸ್ಪರ್ಧೆಯನ್ನು ಎಳೆದರು. ಕೊನೆಗೂ ಲಿರೆನ್​ ಕೊನೇ ಪಂದ್ಯದಲ್ಲಿ ಮಾಡಿದ ದೊಡ್ಡ ಎಡವಟ್ಟಿನ ನಡೆಯೊಂದು ಗುಕೇಶ್​ ಅತಿಕಿರಿಯ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮುವಂತೆ ಮಾಡಿತು. 55ನೇ ನಡೆಯಲ್ಲಿ ಲಿರೆನ್​ ಇಟ್ಟ ಆ ದಾಳದ ಎಡವಟ್ಟಿನ ವಿವರಣೆ ಇಲ್ಲಿದೆ...

ಬಿಳಿ ಕಾಯಿಯೊಂದಿಗೆ ಕೊನೇ ಪಂದ್ಯ ಆಡಿದ ಲಿರೆನ್​ ಗೆಲುವಿಗೆ ಹೆಚ್ಚಿನ ಅವಕಾಶ ಹೊಂದಿದ್ದರು. ಹಿಂದಿನ 2 ಪಂದ್ಯಗಳನ್ನು ಬಿಳಿ ಕಾಯಿಯಲ್ಲೇ ಗೆದ್ದಿದ್ದ ಗುಕೇಶ್​ ಕೂಡ ಕಪು$್ಪ ಕಾಯಿಯೊಂದಿಗೆ ಗೆಲ್ಲುವ ಅವಕಾಶ ವಿರಳವಿತ್ತು. ಹೀಗಾಗಿ ಗುಕೇಶ್​ ಡ್ರಾದತ್ತಲೇ ಹೆಚ್ಚಿನ ಒಲವು ಹೊಂದಿದ್ದರು ಮತ್ತು ಮುಖಾಮುಖಿ ಟೈಬ್ರೇಕರ್​ಗೆ ಸಾಗುವುದು ಬಹುತೇಕ ಖಚಿತವೆನಿಸಿತ್ತು. ಆದರೆ ಪಂದ್ಯ 50 ನಡೆಗಳನ್ನು ದಾಟಿದ ಬಳಿಕ 32 ವರ್ಷದ ಲಿರೆನ್​ ಏಕಾಗ್ರತೆಯಲ್ಲಿ ಭಂಗ ಉಂಟಾಗಿ ಚೆಸ್​ ಇತಿಹಾಸದಲ್ಲೇ ಅತಿದೊಡ್ಡ ಎಡವಟ್ಟಿನ ದಾಳ ಪ್ರಯೋಗ ಮಾಡಿ ಸೋಲು ಅನುಭವಿಸುವಂತಾಯಿತು.

ಲಿರೆನ್​ 55ನೇ ನಡೆಯಲ್ಲಿ ತನ್ನ ರೂಕ್​ (ಆನೆ) ದಾಳವನ್ನು ಎಫ್​​4ರಿಂದ ಎಫ್​​2ಕ್ಕೆ ಚಲಿಸಿದರು. ಇದು ಅತಿದೊಡ್ಡ ಎಡವಟ್ಟಿನ ಹೆಜ್ಜೆ ಆಗಿತ್ತು ಮತ್ತು ಗುಕೇಶ್​ಗೆ ಪಂದ್ಯ ಗೆಲ್ಲಲು ವರದಾನವೆನಿಸಿತು. ಲಿರೆನ್​ ಎಫ್​2ಕ್ಕೆ ಇಟ್ಟ ರೂಕ್​ ದಾಳವನ್ನು ಗುಕೇಶ್​ ತನ್ನ ರೂಕ್​ ದಾಳವನ್ನು ಬಲಿಕೊಟ್ಟು ಉರುಳಿಸಿದರು. ಬಳಿಕ ಇಬ್ಬರ ಬಿಷಪ್​ (ರಥ) ದಾಳವೂ ಆಟದಿಂದ ಹೊರಬಿದ್ದಿತು. ಇದರಿಂದ ಬೋರ್ಡ್​ ಮೇಲೆ ಲಿರೆನ್​ರ ಕೇವಲ 2 ದಾಳ ಉಳಿದುಕೊಂಡರೆ, ಗುಕೇಶ್​ 3 ದಾಳ ಹೊಂದಿದ್ದರು. ಅಂದರೆ ಲಿರೆನ್​ ಕಿಂಗ್​ ದಾಳದ ಜತೆಗೆ ಕೇವಲ ಒಂದು ದಾಳ (ಸೈನಿಕ) ಹೊಂದಿದ್ದರೆ, ಗುಕೇಶ್​ ಕಿಂಗ್​ ಜತೆಗೆ 2 ದಾಳ (2 ಸೈನಿಕ) ಹೊಂದಿದ್ದರು. ಇದರಿಂದಾಗಿ ಗುಕೇಶ್​, ಲಿರೆನ್​ಗೆ ಚೆಕ್​ಮೇಟ್​ ನೀಡಿದರು. ಅಲ್ಲದೆ ಓರ್ವ ಸೈನಿಕ ಕೊನೆಯ ಸಾಲಿಗೆ ತಲುಪಿದರೂ ಕ್ವೀನ್​ ಆಗಿ (ರಾಣಿ) ಬಡ್ತಿ ಪಡೆದು ಗುಕೇಶ್​ ಇನ್ನಷ್ಟು ಪ್ರಾಬಲ್ಯ ಸಾಧಿಸುವ ಅವಕಾಶವಿತ್ತು. ಹೀಗಾಗಿ ಲಿರೆನ್​ಗೆ ಬಳಿಕ ಪಂದ್ಯದಲ್ಲಿ ಡ್ರಾ ಸಾಧಿಸುವ ಅಥವಾ ಗೆಲುವು ಸಾಧಿಸುವ ಯಾವ ಅವಕಾಶವೂ ಉಳಿದಿರದ ಕಾರಣ ಅವರು ಗುಕೇಶ್​ ಗೆಲುವನ್ನು ಒಪ್ಪಿಕೊಂಡರು.

ಲಿರೆನ್​ 55ನೇ ನಡೆಯಲ್ಲಿ ಇಟ್ಟ ಎಡವಟ್ಟಿನ ಹೆಜ್ಜೆ (ಎಫ್4 ಟು ಎಫ್​2)

ಈ 55ನೇ ನಡೆಯ ಎಡವಟ್ಟು ಓರ್ವ ಸಾಮಾನ್ಯ ಚೆಸ್​ ಆಟಗಾರನೂ ಮಾಡುವಂಥ ತಪ್ಪಲ್ಲ. ಆದರೆ ವಿಶ್ವ ಚಾಂಪಿಯನ್​ಷಿನ್​ನ ನಿರ್ಣಾಯಕ ಪಂದ್ಯದ ಒತ್ತಡದಲ್ಲಿ ಲಿರೆನ್​  ಎಡವಿದರು. ಹೀಗಾಗಿ ಲಿರೆನ್​ ತೀವ್ರ ಟೀಕೆಗಳನ್ನು ಎದುರಿಸುವಂತಾಗಿದೆ.