ಕ್ರೀಡೆ

ಟೀಮ್​ ಇಂಡಿಯಾ ಮಾಜಿ ಕೋಚ್​ ಗ್ರೇಗ್​ ಚಾಪೆಲ್​ಗೆ ಆರ್ಥಿಕ ಸಂಕಷ್ಟ! ಸಹಾಯಕ್ಕೆ ಮುಂದಾದರು ಸ್ನೇಹಿತರು...

ಅಡಿಲೇಡ್​: ಟೀಮ್​ ಇಂಡಿಯಾದ ಮಾಜಿ ಕೋಚ್​ ಹಾಗೂ ಆಸ್ಟ್ರೆಲಿಯಾ ತಂಡದ ಮಾಜಿ ನಾಯಕ ಗ್ರೇಗ್​ ಚಾಪೆಲ್​ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ನಿಧಿ ಸಂಗ್ರಹದ ಮೂಲಕ ಅವರಿಗೆ ನೆರವಾಗಲು ಗೆಳೆಯರು ಆನ್​ಲೈನ್​ ಅಭಿಯಾನ ಆರಂಭಿಸಿದ್ದಾರೆ.

75 ವರ್ಷದ ಚಾಪೆಲ್​ 2005ರಿಂದ 2007ರ ಅವಧಿಯಲ್ಲಿ ಭಾರತ ತಂಡದ ಮುಕ್ಯ ಕೋಚ್​ ಆಗಿದ್ದರು. ಆಸೀಸ್​ ಪರ 87 ಟೆಸ್ಟ್​ಗಳಲ್ಲಿ 24 ಶತಕಗಳ ಸಹಿತ 7,110 ರನ್​ ಮತ್ತು 74 ಏಕದಿನ ಪಂದ್ಯಗಳಲ್ಲಿ 3 ಶತಕಗಳ ಸಹಿತ 2,331 ರನ್​ ಬಾರಿಸಿದ್ದಾರೆ. ಆದರೆ, ವರ್ಣರಂಜಿತ ಕ್ರಿಕೆಟ್​ ಜೀವನಕ್ಕೆ ತಕ್ಕಂತೆ ಅವರು ಸದ್ಯ ಆರ್ಥಿಕ ನೆಮ್ಮದಿಯ ಜೀವನವನ್ನು ಸಾಗಿಸುತ್ತಿಲ್ಲ ಎನ್ನಲಾಗಿದೆ.

'ನಾನು ಬಡವನೆಂದು ಅಳುತ್ತಿಲ್ಲ. ಆದರೆ ಈಗಿನ ಕ್ರಿಕೆಟಿಗರು ಅನುಭವಿಸುತ್ತಿರುವ ಶ್ರೀಮಂತ ಜೀವನ ನನ್ನದಲ್ಲ. ಅಂಥ ಐಷಾರಾಮಿ ಸೌಕರ್ಯಗಳು ನನಗಿಲ್ಲ' ಎಂದು ಚಾಪೆಲ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೆ ತನ್ನ ಕಾಲದ ಕ್ರಿಕೆಟಿಗರ ಪೈಕಿ ತಾನೊಬ್ಬನೇ ಅಲ್ಲ, ಇನ್ನೂ ಅನೇಕರು ಇದೇ ರೀತಿಯ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ.

"ಗೋಫಂಡ್​ಮೀ' ಪೇಜ್​ ಮೂಲಕ ಚಾಪೆಲ್​ಗಾಗಿ ಗೆಳೆಯರು ನಿಧಿ ಸಂಗ್ರಹಿಸುತ್ತಿದ್ದು, ಇದಕ್ಕೆ ಅವರ ಸಹೋದರರು ಹಾಗೂ ಮಾಜಿ ಕ್ರಿಕೆಟಿಗರಾದ ಇಯಾನ್​ ಮತ್ತು ಟ್ರೆವರ್​ ಚಾಪೆಲ್​ ಕೂಡ ಕೈಜೋಡಿಸಿದ್ದಾರೆ. ಈ ನಿಧಿಯನ್ನು ಸ್ವೀಕರಿಸಲು ಗ್ರೇಗ್​ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.