ಕ್ರೀಡೆ

ಅವಕಾಶಕ್ಕಾಗಿ ಏನನ್ನೂ ಬಿಡ್ಬೇಡಿ! ಫೈನಲ್​ಗೂ ಮುನ್ನವೇ ಆಸಿಸ್​ ವಿರುದ್ಧ ಐಸ್​ಲ್ಯಾಂಡ್​ ಕ್ರಿಕೆಟ್​ ವಾಗ್ದಾಳಿ

ನವದೆಹಲಿ: ನವೆಂಬರ್​ 19ರಂದು ನಡೆಯಲಿರುವ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡವನ್ನು ಐಸ್​ಲ್ಯಾಂಡ್​ ಕ್ರಿಕೆಟ್​ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪಂದ್ಯಕ್ಕೂ ಮುನ್ನ ಎಲ್ಲವನ್ನು ಸರಿಯಾಗಿ ಚೆಕ್​​ ಮಾಡಿಕೊಳ್ಳಿ ಎನ್ನುವ ಮೂಲಕ ಆಸಿಸ್​ ಪಡೆಯ ಕಾಲೆಳೆದಿದೆ.

ನ. 15ರಂದು ನ್ಯೂಜಿಲೆಂಡ್​ ವಿರುದ್ಧ ನಡೆದ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಚ್​ ಮಾರ್ಪಾಡು ಮಾಡಲಾಗಿದೆ. ತಮ್ಮ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುವಂತೆ ಪಿಚ್​ ಬದಲಾಯಿಸಲು ಸ್ವತಃ ಬಿಸಿಸಿಐ ಕೇಳಿದೆ ಎಂದು ಕೆಲವು ಆಸ್ಟ್ರೇಲಿಯಾದ ಮಾಧ್ಯಮಗಳು ಪ್ರಸಾರ ಮಾಡಿದವು. ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಐಸಿಸಿ, ಪಿಚ್ ಬದಲಾಯಿಸುವ ನಿರ್ಧಾರದಲ್ಲಿ ಅಸಾಮಾನ್ಯವೇನೂ ಇಲ್ಲ ಎಂದಿದೆ. ಇದರ ಬೆನ್ನಲ್ಲೇ ಐಸ್​ಲ್ಯಾಂಡ್​ ಕ್ರಿಕೆಟ್​ ಆಸಿಸ್​ ಕ್ರಿಕೆಟಿಗರ ಕಾಲೆಳೆದಿದ್ದು, ಭಾನುವಾರ ಫೈನಲ್​ ಪಂದ್ಯಕ್ಕೂ ಮುನ್ನ "ಅವಕಾಶಕ್ಕಾಗಿ ಏನನ್ನೂ ಬಿಡಬೇಡಿ" ಎಂದಿದೆ.

ಟ್ವೀಟ್​ನಲ್ಲಿ ಏನಿದೆ?

ಆಸಿಸ್​ಗೆ ಸಂದೇಶ: ಫೈನಲ್​ ಪಂದ್ಯಕ್ಕೂ ಮುನ್ನ ಎಲ್ಲವನ್ನು ಚೆಕ್​ ಮಾಡಿಕೊಳ್ಳಿ. ಟಾಸ್​ ಮಾಡುವ ನಾಣ್ಯದ ಮೇಲಿನ ಲೋಹ ಮತ್ತು ಅದರ ಗುರುತುಗಳು, ರೋಲರ್‌ನ ತೂಕ, ಡ್ರೆಸ್ಸಿಂಗ್ ರೂಮ್‌ನ ಬಣ್ಣದಲ್ಲಿರುವ ವಿಷಗಳು, ಚಂದ್ರ ಮತ್ತು ಶುಕ್ರನ ಜೋಡಣೆ ಮುಂತಾದವು ಸೇರಿದಂತೆ ಎಲ್ಲವನ್ನು ಪರಿಶೀಲಿಸಿ. ಅವಕಾಶಕ್ಕಾಗಿ ಏನನ್ನೂ ಬಿಡಬೇಡಿ. ಏಕೆಂದರೆ ನೀವು ಅಸುರಕ್ಷಿತ ಭಾವನೆಯನ್ನು ಕೊನೆಗೊಳಿಸಲು ಬಯಸುವುದಿಲ್ಲ ಎಂದು ಐಸ್​ಲ್ಯಾಂಡ್​ ಕ್ರಿಕೆಟ್​ ಆಸಿಸ್​ ಪಡೆಯನ್ನು ಟೀಕಿಸಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಪಿಚ್ ವಿವಾದವು ಕ್ರಿಕೆಟ್​ ವಾತಾವರಣವನ್ನು ಕೆಡಿಸಿತು. ಡೈಲಿ ಮೇಲ್ ಸೇರಿದಂತೆ ವಿದೇಶಿ ಮಾಧ್ಯಮಗಳು ಪಿಚ್​ ಬದಲಾವಣೆ ಆರೋಪಗಳನ್ನು ಮಾಡಿವೆ. ಸೆಮಿಫೈನಲ್​ಗಾಗಿ "ಬಳಸಿದ ಪಿಚ್"ನಲ್ಲಿ ಆಡಿಸಲು ಬಿಸಿಸಿಐ ನಿರ್ಧರಿಸಿದೆ. "ತಾಜಾ ಪಿಚ್" ನಲ್ಲಿ ಆಡಬೇಕಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದು, ಫೈನಲ್‌ಗಾಗಿ ಅಹಮದಾಬಾದ್‌ನ ಪಿಚ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆಯನ್ನು ಆರೋಪಿಸಿವೆ.

ಭಾರತದ ದಿಗ್ಗಜ ಬ್ಯಾಟರ್​ ಸುನಿಲ್ ಗವಾಸ್ಕರ್ ಅವರು ಪಿಚ್​ ಬದಲಾವಣೆ ವದಂತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಅಂತಹ ಯಾವುದೇ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಭಾರತದ ಬೌಲರ್​ಗಳಿಗೆ ನೆರವಾಗುವಂತೆ ಪಿಚ್ ತಯಾರಿಸಲಾಗುತ್ತಿದೆ ಎಂದು ಹೇಳುವವರೆಲ್ಲಾ ದೊಡ್ಡ ಮೂರ್ಖರು. ಗಮನ ಸೆಳೆಯುವುದಕ್ಕಾಗಿ ಈ ರೀತಿಯ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಪಿಚ್​ ಬದಲಾವಣೆ ಮಾಡಿದರು ಅದು ಟಾಸ್​ಗಿಂತ ಮೊದಲು ಮಾಡುತ್ತಾರೆ. ಪಂದ್ಯದ ಮಧ್ಯದಲ್ಲಿ ಆ ರೀತಿ ಬದಲಾಯಿಸಲು ಸಾಧ್ಯವಿಲ್ಲ. ನೀವು ಉತ್ತಮ ತಂಡ ಆಗಿದ್ದರೆ ಎಂತಹ ಕಷ್ಟ ಪರಿಸ್ಥಿತಿ ಇದ್ದರು ಆಡಿ ಗೆಲ್ಲುತ್ತೀರಾ ಎಂದು ಹೇಳಿದ್ದಾರೆ.

ನ.19ಕ್ಕೆ ಫೈನಲ್​

ಫೈನಲ್​ಗೆ ಲಗ್ಗೆ ಇಟ್ಟಿರುವ ಭಾರತ ಮತ್ತು ಆಸ್ಟ್ರೇಲಿಯಾ ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ. ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)