ಕ್ರೀಡೆ

ನೈಜೀರಿಯಾ ಆಟಗಾರ್ತಿಗೆ ಕಾಲಿನಿಂದ ತುಳಿದ ಇಂಗ್ಲೆಂಡ್​ ತಾರೆಗೆ 2 ಪಂದ್ಯ ನಿಷೇಧ ಶಿಕ್ಷೆ

ಮೆಲ್ಬೋರ್ನ್​: ಆಸ್ಟ್ರೆಲಿಯಾ-ನ್ಯೂಜಿಲೆಂಡ್​ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಫಿಫಾ ವಿಶ್ವಕಪ್​ ಟೂರ್ನಿಯ ಲೀಗ್​ ಹಂತದಲ್ಲಿ 3 ಗೋಲುಗಳನ್ನು ಸಿಡಿಸಿ ಗಮನಸೆಳೆದಿದ್ದ ಇಂಗ್ಲೆಂಡ್​ ತಂಡದ ಯುವ ಫುಟ್​ಬಾಲ್​ ತಾರೆ ಲೌರೆನ್​ ಜೇಮ್ಸ್​, ನಾಕೌಟ್​ ಹಂತದ ಮೊದಲ ಪಂದ್ಯದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಈಗ ಕ್ವಾರ್ಟರ್​ಫೈನಲ್​ ಮತ್ತು ಸೆಮಿಫೈನಲ್​ ಪಂದ್ಯಗಳನ್ನು ತಪ್ಪಿಸಿಕೊಳ್ಳುವಂತಾಗಿದೆ. ಹಾಲಿ ಚಾಂಪಿಯನ್​ ಅಮೆರಿಕ ಟೂರ್ನಿಯಿಂದ ಹೊರಬಿದ್ದ ಬಳಿಕ ಆಂಗ್ಲರ ತಂಡವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದ್ದರೂ, ಪ್ರಮುಖ ಆಟಗಾರ್ತಿಯೇ 2 ಮಹತ್ವದ ಪಂದ್ಯಗಳಿಗೆ ಅಲಭ್ಯರಾಗಿರುವುದು ಭಾರಿ ಹಿನ್ನಡೆ ತಂದಿದೆ.

ನೈಜೀರಿಯಾ ವಿರುದ್ಧದ ಪಂದ್ಯದಲ್ಲಿ ಎದುರಾಳಿ ಆಟಗಾರ್ತಿ ಮಿಚೆಲ್​ ಅಲೋಜಿ ನೆಲಕ್ಕೆ ಬಿದ್ದಾಗ ಆಕೆಯ ಬೆನ್ನಮೇಲೆ ಕಾಲಿನಿಂದ ತುಳಿದು ಲೌರೆನ್​ ಜೇಮ್ಸ್​ ಮುಂದೆ ಹೋಗಿದ್ದರು. ಇದಕ್ಕಾಗಿ ಪಂದ್ಯದಲ್ಲೇ ಅವರಿಗೆ ರೆಡ್​ ಕಾರ್ಡ್​ ನೀಡಿ ಮೈದಾನದಿಂದ ಹೊರಕಳುಹಿಸಲಾಗಿತ್ತು. ಇದೀಗ, ಎದುರಾಳಿಗೆ ಗೌರವ ತೋರಿಸದ ಆಕೆಯ ವರ್ತನೆಯನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿರುವ ಫಿಫಾ, 2 ಪಂದ್ಯಗಳ ನಿಷೇಧ ಶಿಕ್ಷೆಯನ್ನು ವಿಧಿಸಿದೆ. 16ರ ಘಟ್ಟದ ಪಂದ್ಯದ ಬಳಿಕ ಜೇಮ್ಸ್​ ಕ್ಷಮೆಯಾಚಿಸಿದ್ದರೂ, ಫಿಫಾ ಕಠಿಣ ಕ್ರಮವನ್ನೇ ತೆಗೆದುಕೊಂಡಿದೆ.

ಶನಿವಾರ ಎಂಟರ ಘಟ್ಟದಲ್ಲಿ ಕೊಲಂಬಿಯಾ ತಂಡವನ್ನು ಎದುರಿಸಲಿರುವ ಇಂಗ್ಲೆಂಡ್​, ನಂತರ 4ರ ಘಟ್ಟಕ್ಕೇರಿದರೆ ಅಲ್ಲೂ ಜೇಮ್ಸ್​ ಇಲ್ಲದೆ ಆಡಬೇಕಾಗಿದೆ. ಪ್ರಶಸ್ತಿ ಸುತ್ತು ತಲುಪಿದರೆ ಮಾತ್ರ 21 ವರ್ಷದ ಲೌರೆನ್​ ಜೇಮ್ಸ್​ ಮರಳಿ ಕಣಕ್ಕಿಳಿಯಲಿದ್ದಾರೆ.