ಬರ್ಮಿಂಗ್ಹ್ಯಾಂ: ಭಾರತದ ಯುವ ಷಟ್ಲರ್ ಲಕ್ಷ್ಯ ಸೇನ್ ದಿಟ್ಟ ಹೋರಾಟದ ನಡುವೆಯೂ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಮುಗ್ಗರಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದ್ದು, 23 ವರ್ಷಗಳ ಪ್ರಶಸ್ತಿ ಬರವೂ ಮುಂದುವರಿದಿದೆ.
2022ರ ಆವೃತ್ತಿಯಲ್ಲಿ ರನ್ನರ್ಅಪ್ ಆಗಿದ್ದ 22 ವರ್ಷದ ಲಕ್ಷ್ಯ ಸೇನ್ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ. 9 ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ 12-21, 21-10, 15-21 ಗೇಮ್ಗಳಿಂದ ಪರಾಭವಗೊಂಡರು. ವಿಶ್ವ ನಂ. 18 ಲಕ್ಷ್ಯ ಸೇನ್ ಒಂದು ಗಂಟೆ 8 ನಿಮಿಷಗಳ ಕಾಲ ದಿಟ್ಟ ಹೋರಾಟ ನಡೆಸಿದರು. ಕಳೆದ ವಾರ ಫೆಂಚ್ ಓಪನ್ನಲ್ಲಿ 3 ಗೇಮ್ಗಳ 4 ಪಂದ್ಯಗಳನ್ನು ಆಡಿದ್ದ ಲಕ್ಷ್ಯ, ಇಲ್ಲೂ ಸತತ 3 ಪಂದ್ಯಗಳಲ್ಲಿ 3 ಗೇಮ್ಗಳ ಕಾಲ ಸೆಣಸಿದರು.
ಇದಕ್ಕೆ ಮುನ್ನ ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್, ಅದ್ಭುತ ನಿರ್ವಹಣೆ ತೋರುವ ಮೂಲಕ ಮಾಜಿ ಚಾಂಪಿಯನ್ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಅಚ್ಚರಿಯ ಗೆಲುವು ದಾಖಲಿಸಿದ್ದರು. ಝಿ ಜಿಯಾ ವಿರುದ್ಧ 20-22, 21-16, 21-19 ಗೇಮ್ಗಳಿಂದ 71 ನಿಮಿಷಗಳ ಹೋರಾಟದಲ್ಲಿ ಗೆಲುವು ಸಾಧಿಸಿದರು. ಉತ್ತಮ ವೈವಿಧ್ಯತೆಯ ಆಟ ಪ್ರದರ್ಶಿಸಿದ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಆಕ್ರಮಣಕಾರಿ ಆಟದ ಮೂಲಕ ಕೊನೆಯವರೆಗೂ ದಿಟ್ಟ ಹೋರಾಟ ನಡೆಸಿ ರೋಚಕ ಗೆಲುವು ಒಲಿಸಿಕೊಂಡಿದ್ದರು.