ಕ್ರೀಡೆ

ಬೆಂಗಳೂರು ಬೆಂಬಿಡದ ಸೋಲು, ಸಿದ್ಧಾರ್ಥ್​ ಶತಕದಬ್ಬರಕ್ಕೆ ಗೆದ್ದ ಮಂಗಳೂರು

ಬೆಂಗಳೂರು: ಆರಂಭಿಕ ಕೆ. ಸಿದ್ಧಾರ್ಥ್​ (100*ರನ್​, 64 ಎಸೆತ, 9 ಬೌಂಡರಿ, 4 ಸಿಕ್ಸರ್​) ಶತಕದ ಬಲದಿಂದ ಮಂಗಳೂರು ಡ್ರಾ$ಗನ್ಸ್​ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯಲ್ಲಿ ಹಾಲಿ ರನ್ನರ್​ಅಪ್​ ಬೆಂಗಳೂರು ಬ್ಲಾಸ್ಟರ್ಸ್​ ವಿರುದ್ಧ 23 ರನ್​ಗಳಿಂದ ಗೆಲುವು ದಾಖಲಿಸಿದೆ. ಕೆ. ಗೌತಮ್​ ಬಳಗಕ್ಕೆ ಇದು ಟೂರ್ನಿಯಲ್ಲಿ 2ನೇ ಗೆಲುವಾಗಿದ್ದರೆ, ಮಯಾಂಕ್​ ಅಗರ್ವಾಲ್​ ಸಾರಥ್ಯದ ಬೆಂಗಳೂರು ತಂಡ ಸತತ 4ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಶುಕ್ರವಾರದ 2ನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಮಂಗಳೂರು ತಂಡ 3 ವಿಕೆಟ್​ಗೆ 194 ರನ್​ ಪೇರಿಸಿತು. ಸಿದ್ಧಾರ್ಥ್​ 3ನೇ ವಿಕೆಟ್​ಗೆ ಶಿವಕುಮಾರ್​ (40) ಜತೆ 90 ರನ್​ ಜತೆಯಾಟವಾಡಿದರೆ, ಮುರಿಯದ 4ನೇ ವಿಕೆಟ್​ಗೆ ಅನಿರುದ್ಧ ಜೋಶಿ (31) ಜತೆ 37 ಎಸೆತಗಳಲ್ಲೇ 73 ರನ್​ ದೋಚಿದರು. ಪ್ರತಿಯಾಗಿ ಆದಿತ್ಯ ಗೋಪಾಲ್​ (35ಕ್ಕೆ 3) ದಾಳಿಗೆ ಕುಸಿದ ಬೆಂಗಳೂರು ತಂಡ 8 ವಿಕೆಟ್​ಗೆ 171 ರನ್​ ಗಳಿಸಲಷ್ಟೇ ಶಕ್ತವಾಯಿತು.

ಮಂಗಳೂರು ಡ್ರಾ$ಗನ್ಸ್​: 3 ವಿಕೆಟ್​ಗೆ 194 (ಕೆ. ಸಿದ್ಧಾರ್ಥ್​ 100*, ಶಿವಕುಮಾರ್​ 40, ಅನಿರುದ್ಧ 31*, ರಿಷಿ ಬೋಪಣ್ಣ 40ಕ್ಕೆ 1), ಬೆಂಗಳೂರು ಬ್ಲಾಸ್ಟರ್ಸ್​: 8 ವಿಕಟ್​ಗೆ 171 (ಡಿ. ನಿಶ್ಚಲ್​ 61, ಶುಭಾಂಗ್​ ಹೆಗ್ಡೆ 45, ಸೂರಜ್​ ಅಹುಜಾ 32, ಆದಿತ್ಯ 35ಕ್ಕೆ 3, ಸಂಕಲ್ಪ 20ಕ್ಕೆ 2). ಪಂದ್ಯಶ್ರೇಷ್ಠ: ಕೆ. ಸಿದ್ಧಾರ್ಥ್​.