ಕ್ರೀಡೆ

ಹುಬ್ಬಳ್ಳಿಯಲ್ಲಿ ಪಂಜಾಬ್​ಗೆ ಕೌಶಿಕ್​ ಬ್ರೇಕ್​; ರಣಜಿಯಲ್ಲಿ ಮೊದಲ ದಿನವೇ ಕರ್ನಾಟಕಕ್ಕೆ ಮೇಲುಗೈ

ಹುಬ್ಬಳ್ಳಿ: ವೇಗಿ ವಾಸುಕಿ ಕೌಶಿಕ್​ (41ಕ್ಕೆ 7) ತೋರಿದ ಜೀವಮಾನ ಶ್ರೇಷ್ಠ ಬೌಲಿಂಗ್​ ನಿರ್ವಹಣೆಯ ನೆರವಿನಿಂದ ಆತಿಥೇಯ ಕರ್ನಾಟಕ ತಂಡ, ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಸಿ ಗುಂಪಿನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಮೊದಲ ದಿನವೇ ಮೇಲುಗೈ ಸಾಧಿಸಿದೆ.

ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಪ್ರವಾಸಿ ಪಂಜಾಬ್​ ತಂಡ 152 ರನ್​ಗಳಿಗೆ ಮೊದಲ ಇನಿಂಗ್ಸ್​ ಮುಗಿಸಿತು. ಕರ್ನಾಟಕ ತಂಡ ದಿನದಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡು 142 ರನ್​ಗಳಿಸಿದ್ದು, ಬೃಹತ್​ ಮೊತ್ತ ದಾಖಲಿಸುವ ತವಕದಲ್ಲಿದೆ. ರಾಜ್ಯ ತಂಡ ಸದ್ಯ ಇನಿಂಗ್ಸ್​ ಮುನ್ನಡೆಯಿಂದ ಕೇವಲ 10 ರನ್​ ಹಿಂದಿದೆ. ಶತಕದತ್ತ ದೃಷ್ಟಿನೆಟ್ಟಿರುವ ದೇವದತ್​ ಪಡಿಕ್ಕಲ್​ (80*ರನ್​, 80 ಎಸೆತ, 14 ಬೌಂಡರಿ) ಹಾಗೂ ಮನೀಷ್​ ಪಾಂಡೆ (13*ರನ್​, 22 ಎಸೆತ, 3 ಬೌಂಡರಿ) ಶನಿವಾರಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಕೌಶಿಕ್​ ಮಾರಕ ಬೌಲಿಂಗ್​

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಪಂಜಾಬ್​ ನಾಯಕ ಮಂದೀಪ್​ ಸಿಂಗ್​ ನಿರ್ಧಾರವನ್ನು ವಾಸುಕಿ ಕೌಶಿಕ್​ ಒಬ್ಬರೇ ತಲೆಕೆಳಗೆ ಮಾಡಿದರು. ಅವರು ಮೊದಲ ಸ್ಪೆಲ್​ನ 8 ಓವರ್​ಗಳಲ್ಲಿ ಪ್ರಭ್​ಸಿಮ್ರಾನ್​ ಸಿಂಗ್​ (5), ಅಭಿಷೇಕ್​ ಶರ್ಮ (26), ನಮನ್​ ಧೀರ್​ (4) ಹಾಗೂ ಮಂದೀಪ ಸಿಂಗ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿ ಪ್ರವಾಸಿ ತಂಡಕ್ಕೆ ಆರಂಭದಲ್ಲಿಯೇ ಬಲವಾದ ಹೊಡೆತ ನೀಡಿದರು. ಈ ಹಂತದಲ್ಲಿ ಜತೆಗೂಡಿದ ನೇಹಲ್​ ವಧೇರಾ ಹಾಗೂ ವಿಕೆಟ್​ ಕೀಪರ್​ ಗೀತಾಂಶ್​ ಖೇರ ತಂಡವನ್ನು ಅಪಾಯದಿಂದ ಪಾರು ಮಾಡುವ ಪ್ರಯತ್ನದಲ್ಲಿದ್ದರು. ಆದರೆ, 2ನೇ ಸ್ಪೆಲ್​ನಲ್ಲಿ ದಾಳಿಗೆ ಇಳಿದ ಕೌಶಿಕ್​, ಗೀತಾಂಶ್​ ಖೇರ ವಿಕೆಟ್​ ಕಿತ್ತು ಈ ಜತೆಯಾಟವನ್ನು ಬೇರ್ಪಡಿಸಿದರು. ಭೋಜನ ವಿರಾಮಕ್ಕೆ ಮುನ್ನ ಉರುಳಿದ ಪಂಜಾಬ್​ ತಂಡದ ಎಲ್ಲ 5 ವಿಕೆಟ್​ಗಳು ಕೌಶಿಕ್​ ಪಾಲಾದವು. ಬಳಿಕ ಪಂಜಾಬ್​ ತಂಡ ಹೆಚ್ಚು ಪ್ರತಿರೋಧ ತೋರಲಿಲ್ಲ. ಪಂದ್ಯದ 38ನೇ ಓವರ್​ನಲ್ಲಿ ಸತತ 2 ಎಸೆತಗಳಲ್ಲಿ ನೇಹಲ್​ ಹಾಗೂ ಸಿದ್ದಾರ್ಥ್​ ಕೌಲ್​ ವಿಕೆಟ್​ ಪಡೆದ ಕೌಶಿಕ್​ ಹ್ಯಾಟ್ರಿಕ್​ ಅವಕಾಶ ಹೊಂದಿದ್ದರು. ಆದರೆ, ಅರ್ಷದೀಪ್​ ಸಿಂಗ್​ ಸಿಕ್ಸರ್​ ಸಿಡಿಸಿ ಹ್ಯಾಟ್ರಿಕ್​ ತಪ್ಪಿಸಿದರು.

ಜೀವನಶ್ರೇಷ್ಠ ಪ್ರದರ್ಶನ

ವಾಸುಕಿ ಕೌಶಿಕ್​ ಪಂದ್ಯದಲ್ಲಿ 41 ರನ್​ ನೀಡಿ 7 ವಿಕೆಟ್​ ಕಬಳಿಸಿದ್ದು ಪ್ರಥಮ ದರ್ಜೆ ಕ್ರಿಕೆಟ್​ನ ಇನಿಂಗ್ಸ್​ವೊಂದರಲ್ಲಿ ಅವರ ಅತ್ಯುತ್ತಮ ಬೌಲಿಂಗ್​ ಪ್ರದರ್ಶನವಾಗಿದೆ. ಈ ಹಿಂದೆ ಅವರು ಕೇರಳ ವಿರುದ್ಧ 54 ರನ್​ ನೀಡಿ 6 ವಿಕೆಟ್​ ಕಬಳಿಸಿದ್ದರು. 2022&23ರ ರಣಜಿ ಋತುವಿನಲ್ಲಿ ಕೌಶಿಕ್​ 5 ಪಂದ್ಯಗಳಲ್ಲಿ 24 ವಿಕೆಟ್​ ಪಡೆದಿದ್ದರು.

ರೋಹಿತ್​ ಪದಾರ್ಪಣೆ

ಕರ್ನಾಟಕ ಪರ ಈ ಪಂದ್ಯದ ಮೂಲಕ ಹುಬ್ಬಳ್ಳಿ ಹುಡುಗ ಎಡಗೈ ಸ್ಪಿನ್ನರ್​ ರೋಹಿತ್​ ಕುಮಾರ್​ ಎ.ಸಿ. ರಣಜಿಗೆ ಪದಾರ್ಪಣೆ ಮಾಡಿದರು. ಅವರು ಬಲ್ತೇಜ್​ ಸಿಂಗ್​ ವಿಕೆಟ್​ ಪಡೆದು ಪಂಜಾಬ್​ ತಂಡದ ಇನಿಂಗ್ಸ್​ ಕೊನೆಗೊಳಿಸಿದರು.

ಪಂಜಾಬ್​: 46.5 ಓವರ್​ಗಳಲ್ಲಿ 152 (ಅಭಿಷೇಕ್​ ಶರ್ಮ 26, ನೇಹಲ್​ ವಧೇರಾ 44, ಗೀತಾಂಶ್​ ಖೇರ 27, ಮಯಾಂಕ್​ ಮಾರ್ಕಂಡೆ 26*, ವಾಸುಕಿ ಕೌಶಿಕ್​ 41ಕ್ಕೆ 7, ವೈಶಾಕ್​ 35ಕ್ಕೆ 2, ರೋಹಿತ್​ ಕುಮಾರ್​ ಎ.ಸಿ. 18ಕ್ಕೆ 1). ಕರ್ನಾಟಕ: 33 ಓವರ್​ಗಳಲ್ಲಿ 3 ವಿಕೆಟ್​ಗೆ 142 (ಸಮರ್ಥ್​ 38, ಮಯಾಂಕ್​ 0, ದೇವದತ್​ ಪಡಿಕ್ಕಲ್​ 80*, ನಿಕಿನ್​ 8, ಮನೀಷ್​ ಪಾಂಡೆ 13*, ಅರ್ಷದೀಪ್​ ಸಿಂಗ್​ 37ಕ್ಕೆ 1, ಪ್ರೇರಿತ್​ 18ಕ್ಕೆ 1, ನಮನ್​ ಧೀರ್​ 13ಕ್ಕೆ 1).