ಕ್ರೀಡೆ

ಕಿವೀಸ್​ ವಿರುದ್ಧ ಕಳಪೆ ನಿರ್ವಹಣೆ ಬೆನ್ನಲ್ಲೇ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಭಾರಿ ಕುಸಿತ ಕಂಡ ಕೊಹ್ಲಿ!

ನವದೆಹಲಿ: ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ನೀರಸ ನಿರ್ವಹಣೆಯೊಂದಿಗೆ ವಿರಾಟ್​ ಕೊಹ್ಲಿ ಐಸಿಸಿ ಟೆಸ್ಟ್​ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಸ್ಥಾನಕ್ಕೆ ಕುಸಿದಿದ್ದಾರೆ. 8 ಸ್ಥಾನ ಕುಸಿತದೊಂದಿಗೆ 2014ರ ಬಳಿಕ ಮೊದಲ ಬಾರಿ ಅಗ್ರ 20ರಿಂದ ಹೊರಬಿದ್ದಿರುವ ಕೊಹ್ಲಿ, 22ನೇ ಸ್ಥಾನಕ್ಕಿಳಿದಿದ್ದಾರೆ. ನಾಯಕ ರೋಹಿತ್​ ಶರ್ಮ ಕೂಡ 2 ಸ್ಥಾನ ಕುಸಿದು 26ನೇ ಸ್ಥಾನಕ್ಕಿಳಿದಿದ್ದಾರೆ.

ಮಂಗಳವಾರವಷ್ಟೇ 36ನೇ ವರ್ಷಕ್ಕೆ ಕಾಲಿಟ್ಟಿರುವ ಕೊಹ್ಲಿ ನ್ಯೂಜಿಲೆಂಡ್​ ವಿರುದ್ಧದ ಸರಣಿಯ 6 ಇನಿಂಗ್ಸ್​ಗಳಲ್ಲಿ ಕೇವಲ 15.50ರ ಸರಾಸರಿಯಲ್ಲಿ ಕೇವಲ 93 ರನ್​ ಗಳಿಸಿದ್ದರು. ಈ ಪೈಕಿ ಬೆಂಗಳೂರು ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ 70 ರನ್​ ಬಾರಿಸಿದ್ದನ್ನು ಬಿಟ್ಟರೆ, ಇತರ 5 ಇನಿಂಗ್ಸ್​ಗಳಲ್ಲಿ 0, 1, 17, 4, 1 ರನ್​ಗಳನ್ನಷ್ಟೇ ಗಳಿಸಿದ್ದರು.

2014ರ ಇಂಗ್ಲೆಂಡ್​ ಪ್ರವಾಸದ 5 ಇನಿಂಗ್ಸ್​ಗಳಲ್ಲಿ ಕೇವಲ 134 ರನ್​ ಗಳಿಸಿ ನಿರಾಸೆ ಮೂಡಿಸಿದಾಗ ಕೊಹ್ಲಿ ಕೊನೆಯದಾಗಿ ಅಗ್ರ 20ರಿಂದ ಹೊರಗಿದ್ದರು. ನಂತರ 2014ರ ಡಿಸೆಂಬರ್​ನಿಂದ 2024ರ ನವೆಂಬರ್​ ತನಕವೂ ಅಗ್ರ 20ರೊಳಗಿದ್ದರು. 2018ರಲ್ಲಿ ವಿಶ್ವ ನಂ. 1 ಬ್ಯಾಟರ್​ ಕೂಡ ಆಗಿದ್ದರು. 2019ರಲ್ಲಿ 55.10ಕ್ಕೇರಿದ್ದ ಕೊಹ್ಲಿ ಟೆಸ್ಟ್​ ಬ್ಯಾಟಿಂಗ್​ ಸರಾಸರಿಯೂ ಈಗ 47.83ಕ್ಕಿಳಿದಿದೆ.