ಸೆಂಚುರಿಯನ್: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕುಟುಂಬದ ತುರ್ತು ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತವರಿಗೆ ಮರಳಿದ್ದಾರೆ. ಆದರೆ ಮಂಗಳವಾರ ಆರಂಭವಾಗಲಿರುವ ಹರಿಣಗಳ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಅವರು ತಂಡವನ್ನು ಮರಳಿ ಕೂಡಿಕೊಳ್ಳುವ ನಿರೀಕ್ಷೆ ಇದೆ.
ವಿರಾಟ್ ಕೊಹ್ಲಿ ಬಿಸಿಸಿಐ ಅನುಮತಿ ಪಡೆದು ಭಾರತ ತಂಡವನ್ನು ತೊರೆದಿದ್ದಾರೆ ಎನ್ನಲಾಗಿದೆ. ಕೊಹ್ಲಿ ಕಳೆದ ಗುರುವಾರ ತಂಡದಿಂದ ಹೊರಗುಳಿದಿದ್ದಾರೆ. ಇದು ಪೂರ್ವ ನಿರ್ಧರಿತವಾಗಿತ್ತು. ಇದರಿಂದಾಗಿ ಕೊಹ್ಲಿ ಭಾರತ ತಂಡದೊಳಗೆ ನಡೆದ 3 ದಿನಗಳ ಅಭ್ಯಾಸ ಪಂದ್ಯವನ್ನೂ ಆಡಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕೊಹ್ಲಿ ತವರಿಗೆ ಮರಳಲು ಕಾರಣವಾದ ಕುಟುಂಬದ ತುರ್ತು ಏನೆಂದು ಬಿಸಿಸಿಐ ಸ್ಪಷ್ಟ ವಿವರಣೆ ನೀಡಿಲ್ಲ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊಹ್ಲಿ ಬೆನ್ನು ನೋವಿನಿಂದಾಗಿ ಒಂದು ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇದರಿಂದಾಗಿ ಅವರು ದಣ ಆಫ್ರಿಕಾದಲ್ಲೇ 100ನೇ ಟೆಸ್ಟ್ ಆಡುವ ಅವಕಾಶದಿಂದಲೂ ವಂಚಿತರಾಗಿದ್ದರು. ವಿರಾಟ್ ಕೊಹ್ಲಿ ಭಾನುವಾರ ದಕ್ಷಿಣ ಆಫ್ರಿಕಾಕ್ಕೆ ಮರಳಲಿದ್ದು, ತಂಡದ ಅಭ್ಯಾಸದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.