ಕ್ರೀಡೆ

ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿ ಕೊಹ್ಲಿ, ಜಡೇಜಾ; ಟೆಸ್ಟ್​ ಆಟಗಾರ ಪ್ರಶಸ್ತಿಗೆ ಅಶ್ವಿನ್​​ ನಾಮನಿರ್ದೇಶನ

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತು ಆಲ್ರೌಂಡರ್​ ರವೀಂದ್ರ ಜಡೇಜಾ 2023ರ ಸಾಲಿನ ಐಸಿಸಿ ವರ್ಷದ ಕ್ರಿಕೆಟಿಗರಿಗೆ ನೀಡಲಾಗುವ ಸರ್​ ಗ್ಯಾರಿ ಸೋಬರ್ಸ್​ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಐಸಿಸಿ ವರ್ಷದ ಟೆಸ್ಟ್​ ಆಟಗಾರ ಪ್ರಶಸ್ತಿ ರೇಸ್​ನಲ್ಲಿ ಕಾಣಿಸಿಕೊಂಡಿದ್ದಾರೆ.

2023ರಲ್ಲಿ ನಾಯಕ ಮತ್ತು ವೇಗದ ಬೌಲರ್​ ಆಗಿ ಭರ್ಜರಿ ಯಶಸ್ಸು ಕಂಡ ಆಸ್ಟ್ರೆಲಿಯಾದ ಪ್ಯಾಟ್​ ಕಮ್ಮಿನ್ಸ್​ ಮತ್ತು ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದ ಹೀರೋ ಟ್ರಾವಿಸ್​ ಹೆಡ್​ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿರುವ ಮತ್ತಿಬ್ಬರು ಆಟಗಾರರಾಗಿದ್ದಾರೆ.

ಮಾಜಿ ನಾಯಕ ವಿರಾಟ್​ ಕೊಹ್ಲಿ 2023ರಲ್ಲಿ ಆಡಿದ ಒಟ್ಟು 35 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2,048 ರನ್​ ಸಿಡಿಸಿದ್ದರೆ, ರವೀಂದ್ರ ಜಡೇಜಾ 35 ಪಂದ್ಯಗಳಲ್ಲಿ 613 ರನ್​ ಮತ್ತು 66 ವಿಕೆಟ್​ ಗಳಿಸಿದ್ದಾರೆ. ಟೆಸ್ಟ್​ ವಿಶ್ವ ಚಾಂಪಿಯನ್​ಷಿಪ್​, ಏಕದಿನ ವಿಶ್ವಕಪ್​ ಮತ್ತು ಆಶಸ್​ ಟ್ರೋಫಿ ಬೀಗಿದ ಕಮ್ಮಿನ್ಸ್​ 24 ಪಂದ್ಯಗಳಲ್ಲಿ 59 ವಿಕೆಟ್​ ಮತ್ತು 422 ರನ್​ ಗಳಿಸಿದ್ದಾರೆ. ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಮತ್ತು ಏಕದಿನ ವಿಶ್ವಕಪ್​ ೈನಲ್​ಗಳಲ್ಲಿ ಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿದ್ದ ಟ್ರಾವಿಸ್​ ಹೆಡ್​ 31 ಪಂದ್ಯಗಳಲ್ಲಿ 1,698 ರನ್​ ಬಾರಿಸಿದ್ದಾರೆ.

ವರ್ಷದ ಟೆಸ್ಟ್​ ಕ್ರಿಕೆಟಿಗ ಪ್ರಶಸ್ತಿಗೆ ಆರ್​. ಅಶ್ವಿನ್​, ಆಸ್ಟ್ರೆಲಿಯಾದ ಟ್ರಾವಿಸ್​ ಹೆಡ್​, ಉಸ್ಮಾನ್​ ಖವಾಜ ಮತ್ತು ಇಂಗ್ಲೆಂಡ್​ನ ಜೋ ರೂಟ್​ ಜತೆಗೆ ಪೈಪೋಟಿ ನಡೆಸಲಿದ್ದಾರೆ. ಅಶ್ವಿನ್​ 2023ರಲ್ಲಿ ಆಡಿದ 7 ಟೆಸ್ಟ್​ ಪಂದ್ಯಗಳಲ್ಲಿ 41 ವಿಕೆಟ್​ ಕಬಳಿಸಿದ್ದಾರೆ. ಬಾರ್ಡರ್​-ಗಾವಸ್ಕರ್​ ಟ್ರೋಫಿಯ 4 ಪಂದ್ಯಗಳಲ್ಲಿ 25 ವಿಕೆಟ್​ ಕಬಳಿಸಿ ಮಿಂಚಿದ್ದರು.

ಮಹಿಳೆಯರ ವಿಭಾಗದಲ್ಲಿ ವರ್ಷದ ಕ್ರಿಕೆಟರ್​ ಪ್ರಶಸ್ತಿಗೆ ಶ್ರೀಲಂಕಾದ ಚಾಮರಿ ಅಟಪಟ್ಟು, ಆಸ್ಟ್ರೆಲಿಯಾದ ಬೆತ್​ ಮೂನಿ, ಆಶ್ಲೆ ಗಾರ್ಡ್​ನರ್​ ಮತ್ತು ಇಂಗ್ಲೆಂಡ್​ನ ನಾಟ್​ ಸೀವರ್​-ಬ್ರಂಟ್​ ನಾಮನಿರ್ದೇಶನಗೊಂಡಿದ್ದಾರೆ. ಇನ್ನು ಐಸಿಸಿ ವೆಬ್​ಸೈಟ್​ನಲ್ಲಿ ಅಭಿಮಾನಿಗಳಿಂದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಜನವರಿ ಕೊನೇ ವಾರದಲ್ಲಿ ಪ್ರಶಸ್ತಿ ವಿಜೇತರ ಹೆಸರು ಪ್ರಕಟಗೊಳ್ಳುವ ನಿರೀಕ್ಷೆ ಇದೆ